ಪ್ರಕರಣ, ವಿಚಾರಣೆ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಸಂಸದ ನಳೀನ್
ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ

ಬೆಂಗಳೂರು, ನ.8: ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ದೂರಿನ ಕುರಿತು ಮಂಗಳೂರಿನ 2ನೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ದೂರು ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಕಟೀಲ್ ಆರೋಪಿಸಿದ್ದಾರೆ. ಈ ಅರ್ಜಿ ಶೀಘ್ರ ನ್ಯಾಯಮೂರ್ತಿ ಕೆ.ಎನ್.ಫಣಿಂದ್ರ ಅವರ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಪ್ರಕರಣವೇನು: ರಾಜ್ಯದಲ್ಲಿ ಕೋಮು ಗಲಭೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ 2017ರಂದು ಸೆ.7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮೆರವಣಿಗೆ ನಡೆಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಮಂಗಳೂರು ಪೂರ್ವ ಠಾಣಾ ಇನ್ ಸ್ಪೆಕ್ಟರ್ ಬಂಧಿಸಿದ್ದರು.
ಈ ಕುರಿತು ದೂರವಾಣಿ ಕರೆ ಮೂಲಕ ಮಾಹಿತಿ ಪಡೆದಿದ್ದ ನಳೀನ್ ಕುಮಾರ್ ಕಟೀಲ್, ಅಂದು ಮಧ್ಯಾಹ್ನ 3ಗಂಟೆಗೆ ಠಾಣೆಗೆ ತೆರಳಿ ಕಾರ್ಯಕರ್ತರ ಬಂಧನದ ಕುರಿತ ಡೈರಿಯನ್ನು ತಮಗೆ ತೋರಿಸುವಂತೆ ಇನ್ ಸ್ಪೆಕ್ಟರ್ ಅವರನ್ನು ಕೇಳಿದ್ದರು. ಈ ವೇಳೆ ಪೊಲೀಸ್ ಇನ್ ಸ್ಪೆಕ್ಟರ್ ಅವರು ತಮ್ಮ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಸಂಬಂಧ ಕಟೀಲ್ ಅವರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ದೂರು ನೀಡಿದ್ದರು. ಇದರಿಂದ ಠಾಣಾಧಿಕಾರಿ ಎಫ್‌ಐಆರ್ ದಾಖಲಿಸಿದ್ದರು.
ದೂರು ಸದ್ಯ ಮಂಗಳೂರು 2ನೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣೆ ಹಂತದಲಿದೆ. ಈ ದೂರಿನ ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿರುವ ಕಟೀಲ್, ಜನರ ಪ್ರತಿನಿಧಿಯಾಗಿ ನಾನು ಬಿಜೆಪಿ ಕಾರ್ಯಕರ್ತರ ಬಂಧನದ ಡೈರಿಯನ್ನು ಕೇಳಿದ್ದೆ. ಆದರೆ, ಇನ್ ಸ್ಪೆಕ್ಟರ್ ಡೈರಿಯನ್ನು ತೋರಿಸಲಿಲ್ಲ, ಬಂಧಿತರನ್ನೂ ಬಿಡುಗಡೆ ಮಾಡಲಿಲ್ಲ. ಬದಲಾಗಿ ಕಾರ್ಯಕರ್ತರ ಬಂಧನವನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ದೂರು ನೀಡಿದ್ದರು. ಈ ಕ್ರಮ ಸರಿಯಲ್ಲ ಮತ್ತ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ.







