ಪ್ಯಾರಡೈಸ್ ಪೇಪರ್ಸ್ ಸೋರಿಕೆ: ಇನ್ನಷ್ಟು ಭಾರತೀಯರ ಹೆಸರು ಬಯಲು

ಹೊಸದಿಲ್ಲಿ, ನ.8: ಪ್ಯಾರಡೈಸ್ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಗೆದಷ್ಟೂ ಭಾರತೀಯರ ಹೆಸರುಗಳು ಹೊರಬರುತ್ತಲೇ ಇದೆ. ಬುಧವಾರದಂದು ತನಿಖಾ ವರದಿಗಾರರ ಅಂತಾರಾಷ್ಟ್ರೀಯ ಮಂಡಳಿಯ ಭಾರತೀಯ ಪಾಲುದಾರರಾದ ಇಂಡಿಯನ್ ಎಕ್ಸ್‌ಪ್ರೆಸ್ ಹಲವು ಭಾರತೀಯ ಮೂಲದ ಕಾರ್ಪೊರೇಟ್ ವ್ಯಕ್ತಿಗಳ ಹೆಸರುಗಳನ್ನು ಬಯಲು ಮಾಡಿತು.
13.4 ಕಾರ್ಪೊರೇಟ್ ದಾಖಲೆಗಳನ್ನು ಹೊಂದಿರುವ ಪ್ಯಾರಡೈಸ್ ಪೇಪರ್ಸ್ ಬರ್ಮುಡಾ ಮೂಲದ ಆ್ಯಪಲ್‌ಬೈ ಮತ್ತು ಸಿಂಗಾಪುರ್‌ನ ಏಷ್ಯಾಟಿಸಿ ಟ್ರಸ್ಟ್ ಸಂಸ್ಥೆಗಳ ಆರ್ಥಿಕ ಅಂಕಿಅಂಶಗಳನ್ನು ಹೊಂದಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಕೂಡಾ ಇದೆ ಆದರೆ ಎಲ್ಲಾ ಖಾತೆಗಳು ಮತ್ತು ಸಂಸ್ಥೆಗಳು ಅಕ್ರಮವಾಗಿರಲು ಸಾಧ್ಯವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಬಿಡುಗಡೆ ಮಾಡಲಾದ ದಾಖಲೆಗಳಲ್ಲಿ ಲೂಪ್ ಟೆಲಿಕಾಂನ ಪ್ರೋತ್ಸಾಹಕ ಐಪಿ ಖೈತಾನ್, ಕೈಗಾರಿಕೋದ್ಯಮಿ ನಿಮ್ಮಗಡ ಪ್ರಸಾದ್ ಮುಂತಾದವರ ಹೆಸರುಗಳಿವೆ. ಖೈತಾನ್, ತನ್ನ ಭಾವಂದಿರಾದ ಎಸ್ಸಾರ್ ಗ್ರೂಪ್‌ನ ಶಶಿ ರೂಯಿ ಮತ್ತು ರವಿ ರೂಯಿಯ ಎರಡು ಸಾಗರೋತ್ತರ ಸಂಸ್ಥೆಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಈ ಆರೋಪವನ್ನು ಎಸ್ಸಾರ್ ಗ್ರೂಪ್ ತಳ್ಳಿಹಾಕಿದೆ.
ನಿಮ್ಮಡಗ ಪ್ರಸಾದ್ ಮತ್ತು ಅವರ ಸಹೋದರ ಬಹಮಾಸ್‌ನಲ್ಲಿ 28 ಸಾಗರೋತ್ತರ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಪ್ರಸಾದ್‌ರನ್ನು ಈ ಮೊದಲು ವೈಎಸ್‌ಆರ್ ಕಾಂಗ್ರೇಸ್ ಮುಖ್ಯಸ್ಥ ವೈಎಸ್ ಜಗನ್ಮೋಹನ್ ರೆಡ್ಡಿ ಪ್ರಕರಣದಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು.
ಡಿಎಸ್ ಕನ್ಸ್ಟ್ರಕ್ಷನ್ ಸಂಸ್ಥೆ 135 ಮಿಲಿಯನ್ ಡಾಲರ್‌ಗಳ ಸಾಲವನ್ನು ಬಾಕಿಯುಳಿಸಿದ್ದ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್ ಕೂಡಾ ಆ್ಯಪಲ್‌ಬೈಯ ಸಲಹೆಯನ್ನು ಕೋರಿತ್ತು. ಈ ಪ್ರಕರಣ ಕಳೆದ ವರ್ಷ ಕೊನೆಯಾಗಿತ್ತು.
ಕೆಲವು ಮಾಧ್ಯಮಗಳ ಹೆಸರುಗಳು ಕೂಡಾ ಪ್ಯಾರಡೈಸ್ ಪೇಪರ್ಸ್‌ನಲ್ಲಿ ಕಂಡುಬಂದಿದ್ದು ಎಲ್ಲಾ ಸಂಸ್ಥೆಗಳು ತಾವು ದೇಶದ ಕಾನೂನಿನಡಿಯಲ್ಲೇ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿವೆ.
ಪ್ಯಾರಡೈಸ್ ಪೇಪರ್ಸ್‌ನಲ್ಲಿ ತನ್ನ ಹೆಸರು ಕಾಣಿಸಿಕೊಂಡಿರುವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಆರ್‌ಕೆ ಸಿನ್ಹಾ, ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿ ಅದರ ವಿರುದ್ಧ ಮಾನಹಾನಿ ಪ್ರಕ್ರಿಯೆನ್ನು ಆರಂಭಿಸುವಂತೆ ರಾಜ್ಯಸಭಾ ಮುಖ್ಯಸ್ಥ ವೆಂಕಯ್ಯ ನಾಯ್ಡು ಅವರಲ್ಲಿ ಆಗ್ರಹಿಸಿದ್ದಾರೆ.
ತಾನು ನಾಯ್ಡುಗೆ ಬರೆದಿರುವ ಪತ್ರದ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಸಿನ್ಹಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೇಸ್ ನಾಯಕರಾದ ಪಿ ಚಿದಂಬರಂ ಮತ್ತು ಸಚಿನ್ ಪೈಲಟ್ ಅವರ ಹೆಸರುಗಳೂ ಸೋರಿಕೆಯಲ್ಲಿ ಬಯಲಾಗಿದ್ದರೂ ಅವರ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಯಾವುದೇ ವರದಿಯನ್ನು ಪ್ರಕಟಿಸುತ್ತಿ ಲ್ಲ ಎಂದು ಆರೋಪಿಸಿದ್ದಾರೆ.







