ಕಡಿಮೆ ವೆಚ್ಚದಲ್ಲಿ ಲಿವರ್, ಕಿಡ್ನಿ ಮರುಜೋಡಣೆ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.8: ರಾಜ್ಯದ ಎಲ್ಲ ಸರಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಲಿವರ್, ಮಂಡಿ, ಕಿಡ್ನಿ ಮರುಜೋಡಣೆ ಹಾಗೂ ಡಯಾಲಿಸಸ್ ಚಿಕಿತ್ಸೆಗಳನ್ನು ಉಚಿತ ಇಲ್ಲವೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ, ವೈದ್ಯರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಕಟ್ಟಡ ಶಂಕುಸ್ಥಾಪನೆ ಹಾಗೂ ಎಚ್‌ಎಸ್‌ಐಎಸ್ ಘೋಷಾ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಲಿವರ್ ಮರು ಜೋಡಣೆಗೆ 20ರಿಂದ 25ಲಕ್ಷ ರೂ.ವೆಚ್ಚವಾಗುತ್ತಿದೆ. ಬಡ ರೋಗಿಗಳು ಈ ಚಿಕಿತ್ಸೆಯನ್ನು ಪಡೆಯಲು ಸಾಧ್ಯವೇ. ತಮ್ಮ ಮನೆ-ಜಮೀನುಗಳನ್ನು ಮಾರಾಟ ಮಾಡಿದರು ಈ ದುಬಾರಿ ಚಿಕಿತ್ಸೆಯನ್ನು ಭರಿಸಲು ಸಾಧ್ಯವಿಲ್ಲ. ಹೀಗಾಗಿ ಸರಕಾರದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲೂ ಕೇವಲ 5ಲಕ್ಷ ರೂ.ನಲ್ಲಿ ಲಿವರ್ ಮರುಜೋಡನೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಜೊತೆಗೆ ಎಮ್‌ಆರ್‌ಐ ಸ್ಕಾನ್ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಉನ್ನತ ಸೌಲಭ್ಯಗಳು ಸರಕಾರಿ ಆಸ್ಪತ್ರೆಗಳಲ್ಲೂ ಸಿಗುವಂತೆ ವ್ಯವಸ್ಥೆ ಮಾಡಬೇಕು. ರಾಜ್ಯದ ಯಾವೊಬ್ಬ ವ್ಯಕ್ತಿಯೂ ತಮ್ಮ ಖಾಯಿಲೆಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲವೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಬಾರದು ಎಂದು ಸೂಚಿಸಿದರು.
ಬಡ ಮಕ್ಕಳ ವೈದ್ಯರಾಗಬೇಕು: ಕಳೆದ ನಾಲ್ಕೂವರೆ ವರ್ಷದಲ್ಲಿ ನಮ್ಮ ಸರಕಾರದ ಸಾಮಾನ್ಯ, ಗ್ರಾಮೀಣ ಹಾಗೂ ಬಡವರನ್ನು ಕೇಂದ್ರವಾಗಿಸಿಕೊಂಡು ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಹೀಗಾಗಿ ಬಡವರ ಮಕ್ಕಳು ವೈದ್ಯರಾಗಬೇಕು ಹಾಗೂ ಬಡವರಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕನಿಷ್ಠ ಒಂದು ಸರಕಾರಿ ಜಿಲ್ಲಾಸ್ಪತ್ರೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಪ್ರಸ್ತುತ ಬೋರಿಂಗ್ ಆಸ್ಪತ್ರೆಯೂ ಒಳಗೊಂಡಂತೆ ಒಟ್ಟು 17ಜಿಲ್ಲಾಸ್ಪತ್ರೆಗಳಿದ್ದು, ಇನ್ನು ಚಿತ್ರದುರ್ಗ, ಯಾದಗಿರಿ, ಕಲಬುರ್ಗಿ ಸೇರಿದಂತೆ ಆರು ಜಿಲ್ಲಾಸ್ಪತ್ರೆಗೆ ಆದೇಶಿಸಲಾಗಿದೆ ಎಂದರು.
ಆರೋಗ್ಯ ಸಚಿವ ರಮೇಶ್‌ಕುಮಾರ್ ಮಾತನಾಡಿ, ಕಳೆದ 30 ವರ್ಷಗಳಲ್ಲಿ ಖಾಸಗಿ ಆಸ್ಪತ್ರೆಗಳ ಹಾವಳಿ ಮಿತಿ ಮೀರಿದೆ. ಇಂತಹ ಆಸ್ಪತ್ರೆಗಳಿಂದ ಬಡ ರೋಗಿಗಳನ್ನು ಕಾಪಾಡಬೇಕಾದರೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಪಾತ್ರ ಬಹುದೊಡ್ಡದಿದೆ. ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ವೈದ್ಯರು ಪ್ರೀತಿ ವಿಶ್ವಾಸದಿಂದ ಕಾಣಬೇಕಾಗಿದೆ. ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದು, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಮಾತನಾಡಿ, ಸುಮಾರು 150ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬುದು ನನ್ನ ಕನಸಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಕನಸನ್ನು ನನಸು ಮಾಡಿದ್ದಾರೆ. ಇದರಿಂದ ಇಲ್ಲಿನ ಕೂಲಿಕಾರ್ಮಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಮೇಯರ್ ಆರ್.ಸಂಪತ್‌ರಾಜ್, ಶಾಸಕ ಬೈರತಿ ಸುರೇಶ್, ಪಾಲಿಕೆ ಸದಸ್ಯ ವಸಂತ್ ಕುಮಾರ್ ಮತ್ತಿತರರಿದ್ದರು.
ರಾಜ್ಯದ ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಓದಲು ಮುಗಿ ಬೀಳುತ್ತಾರೆ. ಆದರೆ, ಸರಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಒಂದು ವರ್ಷವಾದರೂ ಕೆಲಸ ಮಾಡಿ ಎಂದರೆ ಹಿಂದೇಟು ಹಾಕುತ್ತಾರೆ. ಈ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.
-ಸಿದ್ದರಾಮಯ್ಯ ಮುಖ್ಯಮಂತ್ರಿ
ಆರೋಗ್ಯ ಸಚಿವ ರಮೇಶ್‌ಕುಮಾರ್ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಉದ್ದೇಶಿಸಿದ್ದಾರೆ. ಆ ಮಸೂದೆಯನ್ನು ಬಡವರ, ಸಾಮಾನ್ಯ ಜನತೆಯ ಹಿತವನ್ನು ಬಯಸುವ ಎಲ್ಲರೂ ಬೆಂಬಲಿಸಬೇಕಾಗಿದೆ.
-ರೋಷನ್ ಬೇಗ್ ನಗರಾಭಿವೃದ್ಧಿ ಸಚಿವ







