ಡಿಜಿಟಲ್ ವ್ಯವಹಾರ, ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹೆಚ್ಚಳ: ಗಡ್ಕರಿ

ಮುಂಬೈ, ನ.8: ನೋಟು ಅಮಾನ್ಯದಿಂದ ಡಿಜಿಟಲ್ ವ್ಯವಹಾರದಲ್ಲಿ ಶೇಕಡಾ 58 ಏರಿಕೆಯಾಗಿದೆ ಮತ್ತು ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರೂ. 500 ಮತ್ತು ರೂ. 1000ದ ನೋಟುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದಿಂದ ಕೇವಲ ಕಪ್ಪುಹಣ ಹೊಂದಿದ್ದವರಿಗೆ ಮಾತ್ರ ಕಷ್ಟವಾಗಿದೆ ಎಂದು ಗಡ್ಕರಿ ಇದೇ ವೇಳೆ ತಿಳಿಸಿದ್ದಾರೆ.
ಇದು ಸರಕಾರಿ ಅಂಕಿಂಶಗಳಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡಿಜಿಟಲ್ ವ್ಯವಹಾರದಲ್ಲಿ ಶೇಕಡಾ 58 ಏರಿಕೆಯಾಗಿದೆ. ಇದರಿಂದ ಹಿಂದಿರುವ ಉದ್ದೇಶ ದೈನಂದಿನ ಜೀವನದಲ್ಲಿ ನಗದು ವ್ಯವಹಾರವನ್ನು ಕಡಿಮೆಗೊಳಿಸುವುದೇ ಆಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ಸಚಿವರು ತಿಳಿಸಿದರು.
2016ರಲ್ಲಿ ದೇಶದಲ್ಲಿ 26 ಲಕ್ಷ ತೆರಿಗೆ ಪಾವತಿದಾರರಿದ್ದು ನೋಟು ಅಪನಗದೀಕರಣದ ನಂತರ ಈ ಸಂಖ್ಯೆ 56 ಲಕ್ಷಗಳಷ್ಟು ಏರಿಕೆ ಕಂಡಿದೆ. ಅಂದರೆ ಇವರೆಲ್ಲಾ ಈ ಹಿಂದೆ ತೆರಿಗೆ ವಂಚಿಸುತ್ತಿದ್ದರು ಎಂದು ಹೇಳಿದರು.
ನೋಟು ಅಮಾನ್ಯ ನಿರ್ಧಾರದಿಂದ ಕೆಲವರಿಗೆ ಬೇಸರವಾಗಿದೆ ಮತ್ತು ಯಾಕಾಗಿದೆ ಎಂಬುದು ನಮಗೆ ತಿಳಿದಿದೆ. ಅವರ ಬಳಿ ಕಪ್ಪುಹಣವಿದ್ದು ಅದು ನೋಟು ನಿಷೇಧದ ನಂತರ ನಿಷ್ಪ್ರಯೋಜಕವಾಗಿತ್ತು ಎಂದು ಗಡ್ಕರಿ ತಿಳಿಸಿದರು.
ದೇಶದಲ್ಲಿ ಹಣ ವಂಚಿಸುವ ಜಾಲವು ಎಷ್ಟೊಂದು ಪ್ರಬಲವಾಗಿದೆಯೆಂದರೆ ನೋಟು ಅಮಾನ್ಯೀಕರಣದ ನಂತರ ಗುಪ್ತಚರ ಸಂಸ್ಥೆಗಳು ಒಂದೇ ಸಂಸ್ಥೆಗೆ ಸೇರಿದ್ದ 2,134 ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಿದ್ದರು. ಕೆಲವೊಂದು ಸಂಸ್ಥೆಗಳು ನೂರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಬಗ್ಗೆಯೂ ನಮ್ಮ ಗಮನಕ್ಕೆ ಬಂದಿದೆ. ಈ ಎಲ್ಲಾ ಪ್ರಕರಣಗಳ ತನಿಖೆ ನಡೆಸಲಾಗುತ್ತಿದ್ದು ಕಪ್ಪುಹಣದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಗಡ್ಕರಿ ತಿಳಿಸಿದರು.







