ನೋಟು ಅಮಾನ್ಯೀಕರಣಕ್ಕೆ1 ವರ್ಷ: ಮೋದಿ ಪ್ರತಿಕೃತಿ ದಹಿಸಿ ಜೆಡಿಯು ಪ್ರತಿಭಟನೆ
ಬೆಂಗಳೂರು, ನ.8: 500, 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ನ.8 ಕ್ಕೆ ಒಂದು ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿಂದು ಕರಾಳ ದಿನ ಎಂದು ಖಂಡಿಸಿ ಜೆಡಿಯು ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮೋದಿ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ ಎಂ.ನಾಡಗೌಡ, ನೋಟು ಅಮಾನ್ಯೀಕರಣವು ದೇಶದ ಆರ್ಥಿಕತೆಗೆ ಅಪ್ಪಳಿಸಿದ ಅತಿ ದೊಡ್ಡ ಸುನಾಮಿಯಾಗಿದೆ. ಪ್ರಧಾನಮಂತ್ರಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಏಕಾಏಕಿ ಈ ರೀತಿಯ ತೀರ್ಮಾನ ಕೈಗೊಂಡಿದ್ದರಿಂದ ಸಾಮಾನ್ಯ ಜನರ ಬದುಕಿನ ಮೇಲೆ ಬರೆ ಎಳೆದಿದ್ದಾರೆ. ಇದುವರೆಗೂ, ಸಾಮಾನ್ಯ ಜನರು ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಪ್ರಧಾನಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರದಿಂದ ದೇಶ ಸ್ವಯಂ ಘೋಷಿತ ತುರ್ತು ಪರಿಸ್ಥಿತಿ ಎದುರಿಸುವಂತಾಗಿದೆ. ಏನನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದವರು ದೇಶದ್ರೋಹಿ ಎಂಬ ಹಣೆ ಪಟ್ಟಿ ಕಟ್ಟುತ್ತಿದ್ದಾರೆ ಎಂದ ಅವರು, ದೇಶದ ಪ್ರಧಾನ ಸ್ವಯಂ ಸೇವಕರು ಹಾಗೂ ಬಿಜೆಪಿ ನಾಯಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಸಮಾಜಕ್ಕೆ ಸುಳ್ಳು ಸಂದೇಶಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ನಿಯಂತ್ರಣ, ಕೋಟಾ ನೋಟುಗಳ ನಿಯಂತ್ರಣಕ್ಕಾಗಿ ನೋಟು ಅಮಾನ್ಯೀಕರಣ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಆದರೆ, ಭ್ರಷ್ಟಾಚಾರವೂ ನಿಯಂತ್ರಣವಾಗಿಲ್ಲ, ಕೋಟ ನೋಟುಗಳ ಚಲಾವಣೆಯೂ ನಿಯಂತ್ರಣವಾಗಿಲ್ಲ. ಅಲ್ಲದೆ, ವಿದೇಶಗಳಲ್ಲಿರುವ ಕಪ್ಪುಹಣ ತಂದು ಭಾರತೀಯ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಾಕಲಾಗುತ್ತದೆ ಎಂದಿದ್ದರು. ಇದುವರೆಗೂ ಎಷ್ಟು ಲಕ್ಷ ಜನರ ಖಾತೆಗಳಿಗೆ ಹಣ ತುಂಬಿಸಲಾಗಿದೆ ಎಂದು ಪ್ರಶ್ನಿಸಿದ ಅವರು, ಅಮಿತ್ ಶಾರ ಮಗನ ಖಾತೆಗೆ ಬಡವರ ಹಣವನ್ನು ತುಂಬಲಾಗಿದೆ ಎಂದು ದೂರಿದರು.
ದೇಶದಾದ್ಯಂತ ನೋಟು ಅಮಾನ್ಯೀಕರಣದಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಭಾರಿ ಪ್ರಮಾಣದ ಹೊಡೆತ ಬಿದ್ದಿದೆ. ಹಲವಾರು ಕೈಗಾರಿಕೆಗಳಿಗೆ ಬೀಗ ಜಡಿದಿದ್ದು, ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಎನ್.ನಾಗೇಶ್, ಸಂಚಾಲಕ ಪಾಲಾಕ್ಷ, ರಾಜ್ಯ ಕಾರ್ಯದರ್ಶಿ ಅಶ್ವತ್‌ನಾರಾಯಣ್‌ಸೇರಿದಂತೆ ಹಲವರು ಉಪಸ್ಥಿತರಿದ್ದರು.







