ಮೀಟರ್ ಬಡ್ಡಿ ದಂಧೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಅಲೋಕ್ ಕುಮಾರ್
ಆರೋಪಿಗಳಿಂದ 40 ಲಕ್ಷ ರೂ.ನಗದು ವಶ
ಕಲಬುರಗಿ, ನ. 8: ಅನಧಿಕೃತವಾಗಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಸ್ಟೇಷನ್ ಬಝಾರ್ ಠಾಣಾ ಪೊಲೀಸರು ಹಲವು ಮಂದಿಯನ್ನು ಬಂಧಿಸಿ, ಆರೋಪಿಗಳಿಂದ 40ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ಅಲೋಕ್ ಕುಮಾರ್, ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಗಾಯಕವಾಡ ಎಂಬವರಿಂದ 40 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸೂಕ್ತ ದಾಖಲೆಗಳಿದ್ದ ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಪ್ರಕರಣ ಸಂಬಂಧ ಸಂಪೂರ್ಣ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗುವುದು ಎಂದ ಅವರು, ಮೀಟರ್ ಬಡ್ಡಿ ದಂಧೆ ಪ್ರಕರಣ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೀಟರ್ ಬಡ್ಡಿ ದಂಧೆ ಸಂಬಂಧ ಶ್ರೀಕಾಂತ ಎಂಬವರ ವಿರುದ್ಧ ಬ್ರಹ್ಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನಿಂದ 3.26ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಸ್ಟೇಷನ್ ಬಝಾರ್ ಠಾಣಾ ಪೊಲೀಸರು ಮೀನಾಕ್ಷಿ ಕಾಂತಾ ಎಂಬವರಿಂದ 3.15ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಾಗರಾಜ ಕಲಶೆಟ್ಟಿ ಎಂಬವರಿಂದ 2.68 ಲಕ್ಷ ರೂ.ರೂ.ಗಳನ್ನು ಜಪ್ತಿ ಮಾಡಲಾಗಿದೆ. ಈ ಮೂರು ಪ್ರತ್ಯೇಕ ಪ್ರಕಣದಲ್ಲಿ ಒಟ್ಟು 9ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಕಲಬುರಗಿ ನಗರ ಸೇರಿದಂತೆ ಈಶಾನ್ಯ ವಲಯದ ಜಿಲ್ಲೆಗಳಲ್ಲಿ ಮೀಟರ್ ಬಡ್ಡಿ ದಂಧೆ ಬಗ್ಗೆ ಸಾರ್ವಜನಿಕರು ದೂರುಗಳನ್ನು ನೀಡಬಹುದು ಎಂದ ಅವರು, ಮೀಟರ್ ಬಡ್ಡಿ ದಂಧೆಗೆ ಯಾವುದೇ ಕಾರಣಕ್ಕೂ ಬಲಿಯಾಗಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು.







