ಮಂಗಳೂರು ಉಪ ವಿಭಾಗಾಧಿಕಾರಿ ಸೇರಿ ಮೂವರಿಗೆ ತಲಾ 50 ಸಾವಿರ ದಂಡ ವಿಧಿಸಿದ ಹೈಕೋರ್ಟ್
ನಕ್ಷೆ ಮಂಜೂರಾತಿ ವಿಳಂಬ ಪ್ರಕರಣ
ಬೆಂಗಳೂರು, ನ.8: ಮಂಗಳೂರಿನ ಬಿಲ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ನಿವಾಸಿ ಹೇಮಂತ್ ಎಂಬವರಿಗೆ ನಕ್ಷೆ ಮಂಜೂರಾತಿ ನೀಡಲು ಒಂದು ವರ್ಷದಿಂದ ಸತಾಯಿಸುತ್ತಿರುವ ಮತ್ತು ನ್ಯಾಯಾಲಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾಖಲೆ ಸಲ್ಲಿಸದ ಕಾರಣಕ್ಕೆ ಮಂಗಳೂರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಬಿಲ್ಮ ಗ್ರಾಮ ಪಂಚಾಯತ್ ಪಿಡಿಒಗೆ ಹೈಕೋರ್ಟ್ ಬುಧವಾರ ತಲಾ 50 ಸಾವಿರ ರೂ. ದಂಡ ವಿಧಿಸಿದೆ.
ವಸತಿ ಕಟ್ಟಡ ನಿರ್ಮಾಣಕ್ಕೆ ತಮಗೆ ನಕ್ಷೆ ಮಂಜೂರಾತಿ ನೀಡದಿರಲು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡ ಮತ್ತು ನಕ್ಷೆ ಮಂಜೂರಾತಿ ನೀಡದ ಕಾರ್ಯಕಾರಿ ಅಧಿಕಾರಿಯ ಕ್ರಮ ಪ್ರಶ್ನಿಸಿ ಹೇಮಂತ್ ಶೆಟ್ಟಿ ಎಂಬವರು ತಕರಾರು ಅರ್ಜಿ ಸಲ್ಲಿಸಿದ್ದರು. ಈ
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರಿದ್ದ ಏಕಸದಸ್ಯ ಪೀಠ, ಮೂರು ದಿನಗಳಲ್ಲಿ ಈ ಮೂವರು ಅಧಿಕಾರಿಗಳು ತಮ್ಮ ಜೇಬಿನಿಂದ ತಲಾ 50 ಸಾವಿರ ರೂ.ವನ್ನು ರಿಜಿಸ್ಟ್ರಾರ್ ಜನರಲ್ ಬಳಿ ಠೇವಣಿಯಿಡಬೇಕು ಎಂದು ತಾಕೀತು ಮಾಡಿದರು.
ಅಲ್ಲದೆ, ಒಂದು ವಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು. ತಪ್ಪಿದರೆ ಠೇವಣಿಯಿಟ್ಟ 50 ಸಾವಿರ ರೂ.ವನ್ನು ಅರ್ಜಿದಾರರಿಗೆ ನೀಡಬೇಕೆ? ಅಥವಾ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕೆ? ಎಂಬುದನ್ನು ತಿಳಿಸಬೇಕು ಅಧಿಕಾರಿಗಳು ಕೋರ್ಟ್‌ಗೆ ನಿರ್ದೇಶಿಸಿದೆ.
ಅರ್ಜಿಯ ಹಿಂದಿನ ವಿಚಾರಣೆ ವೇಳೆ ಪಂಚಾಯತ್ ಪಿಡಿಒ ಆಕ್ಷೇಪಣೆ ಸಲ್ಲಿಸಿ, ಹೇಮಂತ್ ಶೆಟ್ಟಿಯ ತಂದೆಗೆ ಬಿಲ್ಮ ಗ್ರಾಮ ಪಂಚಾಯತ್ ಸರ್ವೇ ನಂ 83ರಲ್ಲಿ ಮಂಜೂರಾಗಿದ್ದ ನಿವೇಶನವನ್ನು ಹಿಂದೆಯೇ ಉಪ ವಿಭಾಗಾಧಿಕಾರಿ ರದ್ದು ಪಡಿಸಿದ್ದಾರೆ ಎಂದು ತಿಳಿಸಿದ್ದರು.
ಇದನ್ನು ಆಕ್ಷೇಪಿಸಿದ ಹೇಮಂತ್ ಶೆಟ್ಟಿ ಪರ ವಕೀಲರು, ನಿವೇಶನ ಮಂಜೂರಾತಿ ರದ್ದಾಗಿರುವ ದಾಖಲೆಯು ಲಭ್ಯವಿಲ್ಲ ಎಂದು ಮಂಗಳೂರು ಜಿಲ್ಲಾ ಪಂಚಾಯತ್ ಸಿಇಒ ತಮಗೆ ಹಿಂಬರಹ ನೀಡಿದ್ದಾರೆ. ಆದರೆ, ಪಿಡಿಓ ನಿವೇಶನ ಮಂಜೂರಾತಿ ರದ್ದಾಗಿದೆ ಎಂದು ನಕಲಿ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಆ ಕುರಿತು ತನಿಖೆ ನೆಸಲು ಆದೇಶಿಸುವಂತೆ ಕೋರಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಹೇಮಂತ್ ತಂದೆ ಅವರಿಗೆ ಮಂಜೂರಾಗಿದ್ದ ನಿವೇಶನ ರದ್ದುಪಡಿಸಿರುವುದಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನ.8ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಅಧಿಕಾರಿಗಳು ಮೂಲ ದಾಖಲೆಗಳನ್ನು ಸಲ್ಲಿಸಲು ವಿಫಲರಾದರು. ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿ ಕೊಠಾರಿ ಅವರು, ನ್ಯಾಯಾಲಯ ನಿರ್ದೇಶಿಸಿದ ಹೊರತಾಗಿಯೂ ದಾಖಲೆಗಳನ್ನು ಸಲ್ಲಿಸದಿರುವುದು ಬೇಜವಾಬ್ದಾರಿ ಧೋರಣೆ. ಇಂತಹ ನಿರ್ಲಕ್ಷತನವನ್ನು ಸಹಿಸಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿ ಮೂವರು ಅಧಿಕಾರಿಗಳಿಗೂ ತಲಾ 50 ಸಾವಿರ ರೂ.ದಂಡ ವಿಧಿಸಿ ಆದೇಶಿಸಿತು.







