ಚೀನಾ: 5 ತಿಂಗಳು ಉಕ್ಕು ಸ್ಥಾವರಗಳು ಬಂದ್
ಚಳಿಗಾಲದ ಮಾಲಿನ್ಯ ನಿಯಂತ್ರಿಸಲು ಕಟ್ಟುನಿಟ್ಟಿನ ಯೋಜನೆ

ಬೀಜಿಂಗ್, ನ. 8: ಬೀಜಿಂಗ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಚಳಿಗಾಲದ ಮಾಲಿನ್ಯವನ್ನು ಕಡಿಮೆ ಮಾಡುವುದಕ್ಕಾಗಿ, ಹತ್ತಾರು ಉಕ್ಕು ಸ್ಥಾವರಗಳನ್ನು 5 ತಿಂಗಳುಗಳ ಕಾಲ ಮುಚ್ಚಲು ಅಥವಾ ಅವುಗಳ ಚಟುವಟಿಕೆಗಳನ್ನು ಕಡಿಮೆ ಮಾಡಲು ಚೀನಾ ನಿರ್ಧರಿಸಿದೆ.
ಪ್ರತಿ ವರ್ಷ ಉತ್ತರ ಚೀನಾದ ಮಾಲಿನ್ಯ ಪ್ರಮಾಣವು ಚಳಿಗಾಲದಲ್ಲಿ ತಾರಕಕ್ಕೇರುತ್ತದೆ. ಹಾಗಾಗಿ, ಪರಿಸ್ಥಿತಿಯನ್ನು ಸುಧಾರಿಸಲು ಆ ವಲಯದ ಹಲವಾರು ಉಕ್ಕಿನ ಸ್ಥಾವರಗಳನ್ನು ಡಿಸೆಂಬರ್‌ಗೆ ಮುಂಚಿತವಾಗಿ ಮುಚ್ಚಲಾಗುತ್ತದೆ.
‘‘ಮುಂದಿನ ಐದು ತಿಂಗಳುಗಳ ಅವಧಿಯಲ್ಲಿ ಚಳಿಗಾಲದ ಅವಧಿಯ ಮಾಲಿನ್ಯವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ 15 ಶೇಕಡದಷ್ಟು ಕಡಿಮೆ ಮಾಡುವ ಉದ್ದೇಶದಿಂದ ಆಕ್ರಮಣಕಾರಿ ಕ್ರಿಯಾ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ವಾರ (ಅಕ್ಟೋಬರ್ ತಿಂಗಳ ಕೊನೆಯ ವಾರ) ‘ಪಿಎಂ 2.5’ ಮಟ್ಟ ಹಲವಾರು ಪ್ರಾಂತಗಳಲ್ಲಿ ಅತ್ಯಂತ ಅನಾರೋಗ್ಯಕರ ಮಟ್ಟವನ್ನು ತಲುಪಿರುವ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ’’ ಎಂದು ಪರಿಸರ ಸಂಘಟನೆ ಗ್ರೀನ್‌ಪೀಸ್‌ನ ವರದಿಯೊಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.





