ಕ್ರಿಕೆಟ್ ಬುಕ್ಕಿ ಗಡಿಪಾರು ತಿರಸ್ಕರಿಸಿ ಬ್ರಿಟನ್ ಮ್ಯಾಜಿಸ್ಟ್ರೇಟ್ ಆದೇಶ
ಹೈಕೋರ್ಟ್‌ನಲ್ಲಿ ಭಾರತ ಮೇಲ್ಮನವಿ

ಲಂಡನ್, ನ. 8: 2000ದಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಭಾರತ ಪ್ರವಾಸದ ವೇಳೆ, ಕ್ರಿಕೆಟ್ ಪಂದ್ಯಗಳನ್ನು ಫಿಕ್ಸ್ ಮಾಡಿರುವ ಆರೋಪಗಳನ್ನು ಎದುರಿಸುತ್ತಿರುವ ಸಂಜೀವ್‌ಕುಮಾರ್ ಚಾವ್ಲಾನನ್ನು ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿ ಇಲ್ಲಿನ ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶವನ್ನು ಭಾರತ ಬ್ರಿಟನ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಚಾವ್ಲಾನನ್ನು ಗಡಿಪಾರು ಮಾಡಬೇಕೆಂಬ ಭಾರತದ ಮನವಿಯನ್ನು ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ರೆಬೆಕಾ ಕ್ರೇನ್ ತಿರಸ್ಕರಿಸಿದ್ದರು. ಹೊಸದಿಲ್ಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಚಾವ್ಲಾನಿಗೆ ಚಿತ್ರಹಿಂಸೆ ನೀಡಲಾಗುವುದು ಅಥವಾ ಅಮಾನವೀಯವಾಗಿ ನಡೆಸಿಕೊಳ್ಳಲಾಗುವುದು ಅಥವಾ ಕೆಟ್ಟದಾಗಿ ಶಿಕ್ಷಿಸಲಾಗುವುದು ಎಂಬ ನೆಲೆಯಲ್ಲಿ ಆತನನ್ನು ಗಡಿಪಾರು ಮಾಡಲು ನ್ಯಾಯಾಧೀಶೆ ನಿರಾಕರಿಸಿದ್ದರು.
ಭಾರತ ಸರಕಾರದ ಪರವಾಗಿ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ (ಸಿಪಿಎಸ್) ಹೈಕೋರ್ಟ್‌ನಲ್ಲಿ ಕಳೆದ ವಾರ ಮೇಲ್ಮನವಿ ಸಲ್ಲಿಸಿದೆ. ತಿಹಾರ್ ಜೈಲಿನಲ್ಲಿ ಇರುವ ಪರಿಸ್ಥಿತಿಗೆ ಸಂಬಂಧಿಸಿ ಗೃಹ ಸಚಿವಾಲಯ ಸಲ್ಲಿಸಿರುವ ಮಹತ್ವದ ದಾಖಲೆಗಳನ್ನು ನ್ಯಾಯಾಧೀಶೆ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಅದು ಹೇಳಿದೆ.
ಆದಾಗ್ಯೂ, ಚಾವ್ಲಾ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗುವಂತಿದೆ ಎಂಬುದಾಗಿ ತನ್ನ ವಿವರವಾದ ತೀರ್ಪಿನಲ್ಲಿ ಕ್ರೇನ್ ಹೇಳಿದ್ದರು.
ತಿಹಾರ್ ಜೈಲಿನಲ್ಲಿ ನಡೆಯುತ್ತಿದೆಯೆನ್ನಲಾದ ಕಸ್ಟಡಿ ಸಾವುಗಳು, ಹಿಂಸೆ, ಕಳಪೆ ವೈದ್ಯಕೀಯ ಸೌಲಭ್ಯಗಳು, ಜನಜಂಗುಳಿ ಮತ್ತು ಅಮಾನವೀಯ ವರ್ತನೆಗಳಿಗೆ ಸಂಬಂಧಿಸಿ ವಿವಿಧ ಪತ್ರಿಕಾ ವರದಿಗಳ ತುಣುಕುಗಳು ಮತ್ತು ಮಾನವಹಕ್ಕು ಸಂಘಟನೆಗಳ ವರದಿಗಳನ್ನು ಚಾವ್ಲಾ ಪರ ವಕೀಲರು ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿದ್ದರು.







