ನೋಟು ನಿಷೇಧ: 396 ಕೋಟಿ ರೂ. ಅಕ್ರಮ ನಿಧಿಯನ್ನು ಜಪ್ತಿಮಾಡಿರುವ ಸಿಬಿಐ

ಹೊಸದಿಲ್ಲಿ, ನ.8: ಕೇಂದ್ರ ಸರಕಾರದ ನೋಟು ಅಮಾನ್ಯ ಘೋಷಣೆಯ ನಂತರ 84 ಅಕ್ರಮ ಕರೆನ್ಸಿ ಪರಿವರ್ತನೆ ಪ್ರಕರ ಣಗಳಿಗೆ ಸಂಬಂಧಪಟ್ಟಂತೆ 396 ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ 84 ಪ್ರಕರಣಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ರೈಲ್ವೇ ಮತ್ತು ವಿಮಾ ಸಂಸ್ಥೆಗಳಲ್ಲಿ ನಡೆದಿರುವ ಅಕ್ರಮ ಕರೆನ್ಸಿ ಬದಲಾವಣೆಗೆ ಸಂಬಂಧಪಟ್ಟ ಏಳು ಪ್ರಾಥಮಿಕ ತನಿಖೆಗಳೂ ಸೇರಿವೆ ಎಂದು ಸಂಸ್ಥೆ ತಿಳಿಸಿದೆ.
ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾನೂನು ಉಲ್ಲಂಘನೆಯ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಲಾಗಿದೆ ಮತ್ತು ಅಗತ್ಯಬಿದ್ದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಮೂಲದಿಂದ ಸಿಬಿಐಗೆ ಈ ರೀತಿಯ 92 ದೂರುಗಳು ಬಂದಿದ್ದವು ಎಂದು ತಿಳಿಸಿದ್ದಾರೆ.
ಹೊಸ ನೋಟುಗಳನ್ನು ದೊಡ್ಡ ಮೊತ್ತಗಳಲ್ಲಿ ಸಂಗ್ರಹಿಸಿದ್ದ ಕೆಲವು ಖಾಸಗಿ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಹಣ ಪಡೆಯುವಲ್ಲಿ ಇದ್ದ ನಿರ್ಬಂಧಗಳನ್ನು ಪರಿಗಣಿಸಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹೊಸ ನೋಟುಗಳು ಹೇಗೆ ಈ ವ್ಯಕ್ತಿಗಳ ಕೈಸೇರಿದವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





