ನೋಟು ಬ್ಯಾನ್: ಕಾಂಗ್ರೆಸ್‍ನಿಂದ ಕರಾಳ ದಿನಾಚಾರಣೆ
ಚಿಕ್ಕಮಗಳೂರು, ನ.8: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದುಡುಕು ಪ್ರಯತ್ನದಿಂದ ಕೈಗೊಂಡ ನೋಟು ಅಮಾನ್ಯೀಕರಣ ಒಂದು ವ್ಯರ್ಥ ಕಸರತ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್ ವಿಜಯಕುಮಾರ್ ಟೀಕಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ನೋಟ್ ಅಮಾನೀಕರಣ ವಿರೋಧಿಸಿ ಬುಧವಾರ ಆಝಾದ್ ವೃತ್ತದಲ್ಲಿ ಆಯೋಜಿಸಿದ್ದ ಕರಾಳ ದಿನ ಆಚಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿಯವರು ಕಳೆದ ವರ್ಷ ಪ್ರಜಾಪ್ರಭುತ್ವದ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಿ ನೋಟು ರದ್ದುಗೊಳಿಸುವ ಮೂಲಕ ದೇಶವನ್ನು ಕತ್ತಲೆಯಲ್ಲಿ ಇಟ್ಟಿದ್ದಾರೆ. ಇದರಿಂದ ಕೋಟ್ಯಾಂತರ ಜನರು ಆರ್ಥಿಕ ದಿವಾಳಿಗೊಳಗಾಗಿದ್ದಾರೆ. ಮನಮೋಹನ್‍ಸಿಂಗ್ ಆಡಳಿತದಲ್ಲಿ ದಶಕಗಳ ಕಾಲ ಸುಭೀಕ್ಷವಾಗಿತ್ತು. ಮೋದಿಯವರ ತೀರ್ಮಾನದಿಂದಾಗಿ ಇಡೀ ದೇಶ ಆರ್ಥಿಕ ಅಧಃ ಪತನಕ್ಕೆ ಒಳಗಾಗಿದೆ ಎಂದು ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ಮಾತನಾಡಿ, ಅಂಬಾನಿ, ಅದಾನಿಗಳಂತ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಮೂಲಕ ಋಣ ತೀರಿಸುವ ಕೆಲಸವನ್ನು ಮೋದಿ ಮಾಡಿದ್ದಾರೆ. ನೂರಾರು ಜನರು ಹಣಕ್ಕಾಗಿ ಪರದಾಡಿ ಜೀವ ಕಳೆದುಕೊಂಡದ್ದು ಪ್ರಪಂಚವೇ ನಾಚುವಂತಹ ಸ್ಥಿತಿ ನಿರ್ಮಿಸಿದ ಮೋದಿಯವರಿಗೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾತಯ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ ಸಂದೀಪ್ ಮಾತನಾಡಿ, ಇತಿಹಾಸದ ಪುಟಗಳನ್ನು ತಿರುವಿದರೆ ಕಾಣಿಸುವಂತೆ ಹಿಟ್ಲರ್ ಹಾಗೂ ತುಘಲಖ್ ದರ್ಬಾರ್ ಮಾಡುತ್ತಿರುವ ಮೋದಿಯವರ ಆಡಳಿತ ರೈತರು, ಕೂಲಿ ಕಾರ್ಮಿಕರು, ಕಿರಾಣಿ ವರ್ತಕರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದ್ದಾರೆ. ಒಂದು ವರ್ಷವಾದರೂ ಬ್ಯಾಂಕ್‍ಗಳಲ್ಲಿ ಜಮೆಯಾಗಿರುವ ಕಪ್ಪುಹಣದ ಮೊತ್ತ ಎಷ್ಟೆಂಬುದನ್ನು ಇಲ್ಲಿಯವರೆಗು ಸರ್ಕಾರ ಜನರಿಗೆ ತಿಳಿಸಲಾಗಿಲ್ಲ ಎಂದರು.
ಈ ವೇಳೆ ಎಐಸಿಸಿ ತೀರ್ಮಾನದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪ್ರತಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‍ನ ರಾಜ್ಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ತ್ರಿಭುವನ್, ಮುಖಂಡರಾದ ಗಾಯಿತ್ರಿಶಾಂತೇಗೌಡ, ನಿಸಾರ್ ಅಹ್ಮದ್, ಶಿವಕುಮಾರ್, ಎಚ್.ಪಿ.ಮಂಜೇಗೌಡ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಕೆ.ಎಂ.ನಾಗರಾಜ್, ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಜಿಲ್ಲಾ ವಕ್ತಾರ ಶಿವಾನಂದಸ್ವಾಮಿ, ಮಹಮದ್ ಅಕ್ಬರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ವೆಂಕಟೇಶ ನಾಯ್ಡು, ಕೆಪಿಸಿಸಿ ವೀಕ್ಷಕ ಶೇಷೇಗೌಡ, ಸೇವಾದಳ ಜಿಲ್ಲಾಧ್ಯಕ್ಷ ಸಿಲ್ವಸ್ಟರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ಸಂದೇಶ್, ಮುನ್ನೀರ್, ರಸುಲ್ ಖಾನ್, ಜೋವರ್, ನಾಗಬೂಷಣ್, ಪ್ರಕಾಶ್, ಎ.ಕೆ. ಪ್ರಕಾಶ್, ಧರ್ಮಯ್ಯ, ನಾಗೇಶ್, ಆನಂದ್ ಮತ್ತಿತರಿದ್ದರು.







