ಹಾಡಹಗಲೇ ಮನೆಗಳಿಗೆ ಕನ್ನ: ಇಬ್ಬರು ಮಹಿಳೆಯರ ಬಂಧನ; ಸೊತ್ತು ವಶ

ಮಂಗಳೂರು, ನ. 8: ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಡಹಗಲೇ ಒಂಟಿ ಮನೆಗಳ ಬಾಗಿಲು ಮುರಿದು ಕಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಹಾಗೂ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂಜತ್‌ಬೈಲ್ ಬಸವನಗರ ಮನೆಯ ಪಾರ್ವತಿ (29), ಕುಂಜತ್‌ಬೈಲ್ ರಾಮನಗರ ನಿವಾಸಿ ಜಯಲಕ್ಷ್ಮಿ(27) ಬಂಧಿತ ಆರೋಪಿಗಳು. ಆರೋಪಿಗಳಿಂದ 2,46,321 ರೂ. ಮೊತ್ತದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದಲ್ಲಿ ಇತ್ತೀಚೆಗೆ ಹಾಡಹಗಲೇ ಒಂಟಿ ಮನೆಗಳ ಬಾಗಿಲಿನ ಬೀಗವನ್ನು ಒಡೆದು ಬೆಲೆಬಾಳುವ ಸೊತ್ತುಗಳನ್ನು ದೋಚುತ್ತಿದ್ದ ಕಳ್ಳರ ಜಾಲವನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು. ಆರೋಪಿಗಳು ಮಂಗಳೂರು ನಗರದಲ್ಲಿ ಗುಜರಿ ಹೆಕ್ಕುವ ನೆಪದಲ್ಲಿ ಒಂಟಿ ಮನೆಗಳನ್ನು ಗುರುತಿಸಿ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲಿನ ಬೀಗವನ್ನು ಮುರಿದು ಬೆಲೆಬಾಳುವ ಸೊತ್ತುಗಳನ್ನು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರು. ಆರೋಪಿಗಳು ಗುಂಪಾಗಿ ಗುಜರಿ ಹೆಕ್ಕುವ ನೆಪದಲ್ಲಿ ಸುತ್ತಾಡಿಕೊಂಡು ನಂತರ ವಾಸ್ತವ್ಯವಿಲ್ಲದ ಮನೆಗಳನ್ನು ಗುರುತಿಸಿ ಈ ಕಳವು ಕೃತ್ಯವನ್ನು ನಡೆಸುತ್ತಿದ್ದರು.
ಆರೋಪಿಗಳು ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡವು ಇರಿಸಿ ಹಣವನ್ನು ಪಡೆದುಕೊಂಡು ಶೋಕಿ ಜೀವನ ನಡೆಸುತ್ತಿದ್ದರು. ಆರೋಪಿಗಳಿಂದ ಒಟ್ಟು 91.230 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಚಿನ್ನಾಭರಣದ ಒಟ್ಟು ಮೌಲ್ಯ ರೂ. 2,46,321 ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಪಾರ್ವತಿ ಹಾಗೂ ಆಕೆಯ ಗಂಡನ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರ ಆದೇಶದಂತೆ ಡಿ.ಸಿ.ಪಿ.ಗಳಾದ ಹನುಮಂತರಾಯ ಹಾಗೂ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದರು.







