ಸಕ್ರಮ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಶಿವಮೂರ್ತಿ ಸೂಚನೆ
ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ

ದಾವಣಗೆರೆ, ನ.8:ಕರ್ನಾಟಕ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗೆ ರಾಷ್ಟ್ರಪತಿಗಳಿಗಳ ಅಂಕಿತ ದೊರಕಿದ್ದು ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿಗೆ ಸಂಬಂಧಿಸಿದ ಸಕ್ರಮೀಕರಣ ದಾಖಲೆಗಳನ್ನು ಸಿದ್ಧಪಡಿಸಿ ಶೀಘ್ರ ವಿಲೇವಾರಿಗೆ ಕ್ರಮ ಜರಗಿಸಬೇಕೆಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕೆ. ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಕುರಿತಂತೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂ ಸುಧಾರಣಾ ಕಾಯ್ದೆಗೆ ವಾಸಿಸುವವನೇ ಭೂ ಒಡೆಯ ಎಂಬ ತಿದ್ದುಪಡಿಗೆ ಅಂಕಿತ ದೊರೆತಿರುವುದರಿಂದ ಹಟ್ಟಿ-ತಾಂಡ-ಹಾಡಿಗಳಲ್ಲಿ ವಾಸಿಸುತ್ತಿರುವ ಭೂರಹಿತರಿಗೆ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಕಾರ್ಯ ಚುರುಕುಗೊಳ್ಳಬೇಕು ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಲಂಬಾಣಿ ತಾಂಡ, ವಡ್ಡರಹಟ್ಟಿ, ಗೊಲ್ಲರಹಟ್ಟಿ, ನಾಯಕನಹಟ್ಟಿ, ಮಜಿರೆ ಗ್ರಾಮ, ದೊಡ್ಡಿ, ಕಾಲನಿ ವಿವಿಧ ಕ್ಯಾಂಪುಗಳು ಸೇರಿದಂತೆ 22 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಸ್ತಾವ ಸಲ್ಲಿಸಲಾಗಿದ್ದು, 10 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ದೊರೆತಿದೆ ಹಾಗೂ ಮತ್ತಿ ಎಂಬ ಒಂದು ಗ್ರಾಮಕ್ಕೆ ಕಂದಾಯ ಗ್ರಾಮವಾಗಿದೆ ಎಂದು ತಿಳಿಸಿದರು.
ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ ಅರಣ್ಯ ಪ್ರದೇಶಗಳ ಸರ್ವೇಗೆ ಸಂಬಂಧಿಸಿದಂತೆ ಕೆಲಸ ಆಗಿದೆ. ಆದರೆ ಬುಡಕಟ್ಟು ಜನಾಂಗದವರೇ ಹೆಚ್ಚಿರುವ ಗುಡಾಳು, ಗುಮ್ಮನೂರು, ಹುಚ್ಚವ್ವನಹಳ್ಳಿ ಸೇರಿದಂತೆ ದಾವಣಗೆರೆಯಲ್ಲಿ ಸರ್ವೇ ಮಾಡಿ ವರದಿ ನೀಡಿಲ್ಲ. ಇದರಿಂದ ಸಕ್ರಮೀಕರಣಕ್ಕೆ ಅನಾನುಕೂಲವಾಗಲಿದೆ. ಹಾಗೂ ಇಲ್ಲಿ ಇದುವರೆಗೂ ಒಂದು ಹಕ್ಕುಪತ್ರವನ್ನು ವಿತರಿಸಲಾಗಿಲ್ಲ. ಆದ್ದರಿಂದ ಶೀಘ್ರ ಕ್ರಮ ಜರುಗಿಸುವಂತೆ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ನಾಗಭೂಷಣ್, ರಾಜೇಶ್ ಕುಮಾರ್, ವಲಯ ಅರಣ್ಯಾಧಿಕಾರಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







