ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸ್ವೀಕಾರಗೊಂಡಿದೆ: ಸಿಪಿಎಂಟಿಎ
ಪ್ಲಾಸ್ಟಿಕ್ ನಿಷೇಧಿಸುವ ತೀರ್ಮಾನ
ಮಂಗಳೂರು, ನ.8: ಕರ್ನಾಟದಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ನಿರ್ಧಾರವನ್ನು ಪ್ರಶ್ನಿಸಿ ಕೆನರಾ ಪ್ಲಾಸ್ಟಿಕ್ ತಯಾರಕರು ಹಾಗೂ ಉದ್ಯಮಿಗಳ ಸಂಘಟನೆಯ ವತಿಯಿಂದ ದೇಶದ ಸರ್ವೊಚ್ಛ ನ್ಯಾಯಾಲಯದಲ್ಲಿ ಹೂಡಲಾದ ದಾವೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.
ನ್ಯಾ.ಮದನ್ ಬಿ ಲೋಕೂರ್ ಮತ್ತು ನ್ಯಾ. ದೀಪಕ್ ಗುಪ್ತಾ ಇರುವ ಪೀಠವು ರಾಜ್ಯ ಸರಕಾರದ ತೀರ್ಮಾನವನ್ನು ಪ್ರಶ್ನಿಸಿದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ರಾಜ್ಯದಲ್ಲಿ ಕರ್ನಾಟಕ ಸರಕಾರ ಪ್ಲಾಸ್ಟಿಕ್ ಉತ್ಫಾದನೆ, ವಿತರಣೆ, ಮಾರಾಟ ಹಾಗೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಇತರ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆಯನ್ನು ನಿಷೇಧಿಸಲು ಮಾಡಿರುವ ತೀರ್ಮಾನವನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸುವುದರಿಂದಾಗುವ ಪರಿಸರ ಮೇಲಾಗುವ ಪರಿಣಾಮದ ಬಗ್ಗೆ ಮಾಲ್ಯಮಾಪನ ಮಾಡದೆ ಈ ತೀರ್ಮಾನ ಕೈ ಗೊಂಡಿರುವುದು (ಎನ್‌ಜಿಟಿ ಯೂ ಇದನ್ನು ಸಮರ್ಥಿಸುವುದಿಲ್ಲ) ಸಮರ್ಪಕವಲ್ಲ. ಪರಿಸರ ಸಂರಕ್ಷಣೆ ಕಾಯಿದೆ 1986 ಸೆಕ್ಷನ್ 5ರ ಪ್ರಕಾರ ರಾಜ್ಯ ಸರಕಾರ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಂಟಿಂಗ್, ಬ್ಯಾನರ್, ಪ್ಲೆಕ್ಸ್, ಪ್ಲಾಗ್ಸ್ ,ಕಪ್, ಚಮಚ, ಕ್ಲಿಂಗ್ ಫಿಲಂ ಮತ್ತು ಶಿಟ್‌ಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ಕೈ ಗೊಳ್ಳುವಂತಿಲ್ಲ. ಅಲ್ಲದೆ ಭಾರತ ಸರಕಾರ ‘ಪ್ಲಾಸ್ಟಿಕ್ ನಿರ್ವಹಣೆಗೆ ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ ಮೆಂಟ್ ರೂಲ್ಸ್ 2011’ ಜಾರಿ ಮಾಡಿದ ಸಂದರ್ಭದಲ್ಲಿ 50 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನಿಷೇಧಿಸಲು ಸೂಚಿಸಿದೆ ಹೊರತು ಎಲ್ಲಾ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನಿಷೇಧಿಸಲು ಸೂಚಿಸಿರುವುದಿಲ್ಲ ಎನ್ನುವುದನ್ನು ಸಿಪಿಎಂಟಿಎ ಸುಪ್ರಿಂ ಕೋರ್ಟ್ ಗಮನಕ್ಕೆ ತರಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಬಿ.ಎ. ನಝೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







