ಶಿವಮೊಗ್ಗ ಡಿಸಿಸಿ ಬ್ಯಾಂಕ್, ಅಧ್ಯಕ್ಷರ ನಿವಾಸಗಳ ಮೇಲೆ ಐಟಿ ದಾಳಿ

ಶಿವಮೊಗ್ಗ, ನ.8: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಡಿ.ಸಿ.ಸಿ. ಬ್ಯಾಂಕ್ ಪ್ರಧಾನ ಕಚೇರಿ, ಮುಖ್ಯ ಶಾಖೆ ಹಾಗೂ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡರ ನಿವಾಸಗಳ ಮೇಲೆ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳ ತಂಡವು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ.
ಆರ್.ಎಂ. ಮಂಜುನಾಥಗೌಡರಿಗೆ ಸೇರಿದ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಮನೆ, ತೀರ್ಥಹಳ್ಳಿ ಹಾಗೂ ಸಿರಿಗೆರೆ ಗ್ರಾಮದ ಸಮೀಪದ ಕರಕುಚ್ಚಿಯಲ್ಲಿರುವ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇನ್ನಷ್ಟೇ ಅಧಿಕೃತ ಮಾಹಿತಿಗಳು ಲಭ್ಯವಾಗಬೇಕಾಗಿದೆ.
ಡಿ.ಸಿ.ಸಿ. ಬ್ಯಾಂಕ್ ಪ್ರಧಾನ ಕಚೇರಿ ಹಾಗೂ ಮುಖ್ಯ ಶಾಖೆಗಳಲ್ಲಿ ಸುಮಾರು 20ಕ್ಕೂ ಅಧಿಕ ಐ.ಟಿ. ಅಧಿಕಾರಿಗಳ ತಂಡವು ಬೆಳಗ್ಗೆ 8 ಗಂಟೆಯಿಂದಲೇ ತಪಾಸಣೆ ನಡೆಸಲಾರಂಭಿಸಿದ್ದು, ಮಧ್ಯಾಹ್ನದವರೆಗೂ ಈ ತಪಾಸಣೆ ಮುಂದುವರಿಸಿದೆ.
ಐಟಿ ಅಧಿಕಾರಿಗಳ ಪರಿಶೀಲನೆ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲಾಗಿತ್ತು. ಗ್ರಾಹಕರ ಪ್ರವೇಶದ ಮೇಲೂ ನಿರ್ಬಂಧ ಹೇರಲಾಗಿತ್ತು. ಡಿ.ಸಿ.ಸಿ. ಬ್ಯಾಂಕ್‌ನ ಎಲ್ಲ ಶಾಖೆಗಳ ವ್ಯವಹಾರದ ನೆಟ್‌ವರ್ಕ್ ಸಂಪರ್ಕ ಕೂಡ ಐಟಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದು, ಇದರಿಂದ ಜಿಲ್ಲೆಯಲ್ಲಿರುವ ಎಲ್ಲ ಡಿ.ಸಿ.ಸಿ. ಬ್ಯಾಂಕ್ ಶಾಖೆಗಳಲ್ಲಿ ಬುಧವಾರದ ದೈನಂದಿನ ವಹಿವಾಟು ಸ್ಥಗಿತಗೊಂಡಿತ್ತು. ಇದರಿಂದ ಗ್ರಾಹಕರು ಪರದಾಡುವಂತಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಹಾಗೂ ಹೊರ ರಾಜ್ಯದ ಐಟಿ ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗವಹಿಸಿದ್ದವು ಎಂದು ಹೇಳಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಡಿ.ಸಿ.ಸಿ. ಬ್ಯಾಂಕ್ ಹಾಗೂ ಅಧ್ಯಕ್ಷರ ನಿವಾಸಗಳ ಮೇಲೆ ದಾಳಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಜೊತೆಗೆ ಸ್ಥಳೀಯ ಐಟಿ ಇಲಾಖೆಯ ಮೂಲಗಳು ಕೂಡ ದಾಳಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಮಾಹಿತಿ ನೀಡಿದೆ.
ದಾಳಿಗೆ ಡಿಕೆಶಿ ಲಿಂಕ್?: ಡಿ.ಸಿ.ಸಿ. ಬ್ಯಾಂಕ್ ಪ್ರಧಾನ ಕಚೇರಿ ಹಾಗೂ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರ ನಿವಾಸಗಳ ಮೇಲೆ ನಡೆದಿರುವ ಐಟಿ ದಾಳಿಗೆ ಕಾರಣವೇನು ಎಂಬುದು ನಿಗೂಢವಾಗಿದೆ.
ಸದ್ಯ ಆರ್.ಎಂ. ಮಂಜುನಾಥಗೌಡರವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡವರು. ಅಲ್ಲದೆ, ಡಿ.ಸಿ.ಸಿ. ಬ್ಯಾಂಕ್ ಶಾಖೆಯಿಂದ ಡಿ.ಕೆ.ಶಿವಕುಮಾರ್ ಕುಟುಂಬ ಒಡೆತನಕ್ಕೆ ಸಂಬಂಧಿಸಿದ ಖಾತೆಗಳಿಗೆ ಹಣ ಜಮೆಯಾಗಿರುವ ಮಾಹಿತಿ ಐ.ಟಿ.ಗೆ ಲಭ್ಯವಾಗಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಈ ದಾಳಿ ನಡೆದಿದೆ ಎಂಬ ಮಾತುಗಳು ಸ್ಥಳೀಯವಾಗಿ ಹರಿದಾಡುತ್ತಿದೆ. ಸದ್ಯ ದಾಳಿಯ ಕಾರಣಗಳು ತಿಳಿದು ಬಂದಿಲ್ಲ.







