ನೋಟು ನಿಷೇಧ ಪ್ರಧಾನಿಯ ಸರ್ವಾಧಿಕಾರಿ ವರ್ತನೆ: ಮುನಿಯಪ್ಪ

ಕೋಲಾರ, ನ.8: ಕೇಂದ್ರ ಸರಕಾರ ಕಳೆದ ವರ್ಷ ನ.8ರಂದು 500 ಹಾಗೂ 1,000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ ಕ್ರಮದಿಂದಾಗಿ ದೊಡ್ಡ ಉದ್ಯಮಿಗಳು ಲಾಭ ಪಡೆದರು. ಅಂಬಾನಿ ಮತ್ತು ಅದಾನಿಯಂತಹ ಉದ್ಯಮಿಗಳು ಲಕ್ಷಾಂತರ ಕೋಟಿ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಮಾರ್ಪಾಡು ಮಾಡಿಕೊಳ್ಳಲು ಸಹಕಾರಿಯಾಯಿತು ಎಂದು ಸಂಸದ ಕೆ.ಎಚ್.ಮುನಿಯಪ್ಪ ಆರೋಪಿಸಿದ್ದಾರೆ.
ಕೋಲಾರ ನಗರದ ಜಿಲ್ಲಾಧಿಕಾರಿಗಳ ಕಚೇರು ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಕರಾಳ ದಿನಾಚಾರಣೆಯ ನೇತೃತ್ವ ವಹಸಿ ಮಾತನಾಡಿದ ಅವರು, ನೋಟುಗಳ ನಿಷೇಧದ ತೀರ್ಮಾನವನ್ನು ಪ್ರಧಾನಿ ಮೋದಿ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದರು. ಇದರಿಂದಾಗಿ ದೇಶದಲ್ಲಿ ಆರ್ಥಿಕ ಅರಾಜಕತೆ ಎದುರಾಗಿದ್ದು, ವರ್ಷ ಕಳೆದಿದ್ದರೂ ಸಾಮಾನ್ಯ ಜನತೆ ನೋಟ್ ಬ್ಯಾನ್ ಕ್ರಮದ ದುಷ್ಪರಿಣಾಮಗಳನ್ನು ಇಂದಿಗೂ ಎದುರಿಸುತ್ತಿದ್ದಾರೆ ಎಂದು ಸಂಸದ ಮುನಿಯಪ್ಪ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ನೋಟ್ ಬ್ಯಾನ್‌ನಿಂದ ಕಪ್ಪುಕುಳಗಳು ಮತ್ತು ಅಂಬಾನಿಗಳಿಗೆ ಲಾಭವಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿ ಕುಸಿದಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಿ ವರ್ತಿಸಿದ್ದು, ಪ್ರಧಾನಿ ಮೋದಿ ಓರ್ವ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ನೋಟ್ ಬ್ಯಾನ್ ಸಂಬಂಧ ಕೇಂದ್ರ ಸರಕಾರ ಸಂಸತ್‌ಅನ್ನು ಕತ್ತಲಲ್ಲಿಟ್ಟಿದ್ದರು. ಮೋದಿ ಸಹದ್ಯೋಗಿಯಾದ ಹಣಕಾಸು ಸಚಿವ ಅರುಣ್ ಜೆಟ್ಲಿ ಅವರಿಗೂ ಈ ಮಾಹಿತಿ ಇರಲಿಲ್ಲ. ಆದರೆ 25 ಮಂದಿ ಉದ್ಯಮಿಗಳಿಗೆ ಒಂದು ವಾರದ ಮೊದಲೇ ಮಾಹಿತಿ ನೀಡಲಾಗಿತ್ತು. ಅವರೆಲ್ಲಾ ಹಳೇ ನೋಟುಗಳನ್ನು ಬ್ಯಾಂಕಿಗೆ ತುಂಬಿದ್ದರಿಂದ ಅಂತಹ ಕೆಲವೇ ಕೆಲವು ಭಾರೀ ಉದ್ಯಮಿಗಳಿಗೆ ನೋಟು ಅಮಾನ್ಯೀಕರಣದಿಂದ ಲಾಭವಾಯಿತು ಎಂದು ಸಂಸದರು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುಧರ್ಶನ್ ಮಾತನಾಡಿ, ಪ್ರಧಾನಿ ಮೋದಿ ಆರ್ಥಿಕ ತಜ್ಞರಲ್ಲ, ನೋಟು ಅಮಾನ್ಯೀಕರಣ ಮಾಡುವ ಮೊದಲು ಎಲ್ಲರ ಜೊತೆ ಸಮಾಲೋಚನೆ ನಡೆಸಬೇಕಾಗಿತ್ತು. ಆದರೆ ದಿಢೀರ್ ನಿರ್ಧಾರ ತೆಗೆದುಕೊಂಡು ದೇಶದ ಜನರಲ್ಲಿ ಆತಂಕ ಮೂಡಿಸಿದರು.
ಈಗಲೂ ಈ ಆತಂಕದ ಪರಿಸ್ಥಿತಿ ಮುಂದುವರಿದಿದೆ. ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಇದೊಂದು ಜನವಿರೋಧಿ ಕ್ರಮವಾಗಿದ್ದು, ಮೋದಿ ಮತ್ತು ಅವರ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ದೂರದೃಷ್ಟಿ ಮತ್ತು ದೇಶದ ಹಿತದೃಷ್ಟಿಯಿಂದ ಇಂತಹ ಕ್ರಮದ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚನೆ ಮಾಡಬೇಕಿದ್ದ ಪ್ರಧಾನಿ ಮೋದಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರುವುದರಿಂದ ಇಡೀ ದೇಶ ಆರ್ಥಿಕವಾಗಿ ದಿವಾಳಿಯಾಗುವಂತಾಗಿದೆ ಎಂದು ಟೀಕಿಸಿದರು.







