ಬಂಜಾರ ಅಕಾಡಮಿ ಸ್ಥಾಪನೆಗೆ ಮನವಿ
ಕೊಳ್ಳೇಗಾಲ, ನ.8: ಬಂಜಾರ ಅಕಾಡಮಿ ಸ್ಥಾಪಿಸುವಂತೆ ಜಿಲ್ಲಾ ಹಮ್ ಗೋರ್ ಕಟಮಾಳೋ ಮತ್ತು ಜಿಲ್ಲಾ ಲಂಬಾಣಿ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಹನೂರು ಶಾಸಕ ಆರ್.ನರೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಂಜಾರ ನೌಕರರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ್, ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬಂಜಾರ ಸಮುದಾಯವು ಸಾಹಿತ್ಯ, ಸಂಗೀತ, ನೃತ್ಯ, ಕಲೆ ಮತ್ತು ಕ್ರೀಡೆಗಳಲ್ಲಿ ವಿಶೇಷ ಪ್ರೌಢಿಮೆ ಹೊಂದಿದ್ದು, ರಾಜ್ಯ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಬಂಜಾರ ಅಕಾಡೆಮಿಯನ್ನು ಸ್ಥಾಪನೆ ಮಾಡುವುದರಿಂದ ಈ ಸಮುದಾಯದ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಶಾಸಕ ಆರ್.ನರೇಂದ್ರ ಮಾತನಾಡಿ, ಬಂಜಾರ ಜನಾಂಗದ ಮನವಿಯ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಕ್ರಮಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಮ್ ಗೋರ್ ಕಟಮಾಳೋ ಮತ್ತು ಜಿಲ್ಲಾ ಲಂಬಾಣಿ ನೌಕರರ ಸಂಘದ ಅಧ್ಯಕ್ಷ ಶಾಂತರಾಜು, ಮಹದೇವನಾಯಕ್, ಲಕ್ಷುನಾಯಕ್, ಮುತ್ತುಸ್ವಾಮಿ, ಮುರುಗ, ರವಿನಾಯಕ್, ಕುಮಾರ, ಗುರುಸ್ವಾಮಿ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.





