ಚಾಮರಾಜನಗರ: ವರುಣನ ಆರ್ಭಟಕ್ಕೆ ಸಾರ್ವಜನಿಕರು ತತ್ತರ
ಚಾಮರಾಜನಗರ, ನ.8: ಜಿಲ್ಲೆಯಾದ್ಯಂತ ಮಂಗಳವಾರ ವಾರ ರಾತ್ರಿ ಸುರಿದ ಭಾರೀ ಮಳೆ ಯಿಂದಾಗಿ ಜನಜೀವನ ತತ್ತರಗೊಂಡಿತ್ತು. ಜಿಲ್ಲಾಡಳಿತ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿ ಕೈಗೊಂಡಿರುವುದರಿಂದ ವರುಣನ ಆರ್ಭಟಕ್ಕೆ ಮಳೆಯ ನೀರು ರಸ್ತೆಯ ಹೊಂಡಗುಂಡಿಗಳಲ್ಲಿ ನಿಂತು ಈಜುಕೊಳದಂತಾಗಿತ್ತು.
ಅಂಗಡಿ ಮಳಿಗೆಗಳಿಗೂ ನೀರು ನುಗ್ಗಿ ಸಾರ್ವಜನಿಕರು ಮತ್ತು ವರ್ತಕರು ಪರದಾಡಿದ ದೃಶ್ಯ ಸಾಮಾನ್ಯವಾಗಿತ್ತು. ಚಾಮರಾಜನಗರದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ನಗರದ ಹೃದಯ ಭಾಗವಾದ ಭುವನೇಶ್ವರಿ ವೃತ್ತ ಅಕ್ಷರಶಃ ಈಜುಕೊಳದಂತಾಗಿ ಮಾರ್ಪಟ್ಟಿತ್ತು. ಒಂದು ಕಡೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆಗಳನ್ನು ಒಡೆದು ಹಾಕಿ ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿರುವುದರಿಂದ ಸರಾಗವಾಗಿ ಹರಿಯದ ಮಳೆ ನೀರು ರಸ್ತೆಯಲ್ಲಿಯೇ ನಿಂತು ಹೊಳೆಯನ್ನು ನೆನಪಿಸಿತು.
ಬಿಡುವಿಲ್ಲದಂತೆ ವಾಹನಗಳ ಸಂಚಾರ ಇರುವ ಭುವನೇಶ್ವರಿ ವೃತ್ತದಲ್ಲಿ ಮಳೆಯ ನೀರು ನೀತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಗರಸಭೆಯ ಅಧಿಕಾರಿಗಳು ನಗರದ ಕೆಲ ಬಡಾವಣೆಗಳ ರಸ್ತೆಗಳನ್ನು ಚರಂಡಿ ನಿರ್ಮಿಸುವ ಉದ್ದೇಶದಿಂದ ಅಗೆದಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ಕೊಳಚೆ ನೀರಿನೊಂದಿಗೆ ಮಿಶ್ರಣಗೊಂಡ ರಸ್ತೆಯ ಮೇಲೆಯೇ ಹರಿದಿದ್ದರಿಂದ ಸಾರ್ವಜನಿಕರು ಮೂಗುಮುಚ್ಚಿಕೊಂಡು ತಿರುಗಾಡುವಂತಾಗಿತ್ತು. ಕೆಲವೆಡೆ ರಸ್ತೆಯ ನೀರು ಅಂಗಡಿ ಮಳಿಗೆಗಳಿಗೆ ನುಗ್ಗಿದ್ದರಿಂದ ಅಂಗಡಿಯಲ್ಲಿದ್ದ ಪ್ಯಾನ್ಸಿ ಪರಿಕರಗಳು ನೀರಿನಲ್ಲಿ ತೆಲಾಡುತ್ತಿದ್ದವು.
ಇಷ್ಟೆಲ್ಲಾ ಮಳೆ ಅವಾಂತರವಾದರೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸದಿರುದರಿಂದ ನಾಗರಿಕರು, ವರ್ತಕರು ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.







