ಯುವ ಕಾಂಗ್ರೆಸ್‌ನಿಂದ ರಾಷ್ಟ್ರಪತಿಗೆ ಮನವಿ

ಮಣಿಪಾಲ, ನ.8: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನ.8ರ ರಾತ್ರಿ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಘೋಷಣೆಯ ನಂತರ ಅವರು ಹೇಳಿದ ಯಾವುದೇ ಉದ್ದೇಶ ಈಡೇರದೇ ದೇಶದ ಜನತೆಯನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಈ ಮೂಲಕ ನ.8 ಕರಾಳ ದಿನವಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ನೋಟು ಅಮಾನ್ಯೀಕರಣದ ಮೂಲ ಉದ್ದೇಶ ಕಪ್ಪುಹಣದ ನಿರ್ಮೂಲನೆ, ನಕಲಿ ನೋಟುಗಳನ್ನು ಇಲ್ಲವಾಗಿಸುವುದು ಮತ್ತು ಭಯೋತ್ಪಾದನಗೆ ಹಣ ಪೂರೈಕೆಯನ್ನು ತಡೆಯುವ ಉದ್ದೇಶ ಹೊಂದಿತ್ತು. ಆದರೆ ಈ ಯಾವ ಉದ್ದೇಶ ಗಳೂ ಈಡೇರದೆ ಸಾರ್ವಜನಿಕರು ಕಷ್ಟ ನಷ್ಟ ಹೊಂದಿ 140ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ದೇಶದ ಜಿಡಿಪಿ ಶೇ.2ರಷ್ಟು ಇಳಿಕೆಯಾಗಿದೆ. ಇದು ಈ ದೇಶ ಕಂಡ ಅತ್ಯಂತ ಆಘಾತಕಾರಿ ದುರಂತ ಹಾಗೂ ಕರಾಳ ದಿನ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಹಬೀಬ್ ಅಲಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹರೀಶ್ ಕಿಣಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಒಬಿಸಿಅಧ್ಯಕ್ಷ ಯತೀಶ್ ಕರ್ಕೇರ, ಕಿರಣ್ ಕುಮಾರ್ ಉದ್ಯಾವರ, ಮೆಲ್ವಿನ್ ಡಿಸೋಜ, ಸಂತೋಷ್ ಬಂಗೇರ, ರಿಯಾನ್ ರೆಹಮಾನ್, ಅಬಿದ್ ಅಲಿ, ಝಿಯಾನ್, ಪೃಥ್ವಿರಾಜ್ ಶೆಟ್ಟಿ, ಧನಂಜಯ್ ಮೊದಲಾದವರು ಉಪಸ್ಥಿತರಿದ್ದರು.







