ಟಿಪ್ಪು ಜಯಂತಿ: ರ್ಯಾಲಿ, ಜಾಥಾ, ಪ್ರತಿಭಟನೆ ನಿಷೇಧ
ಚಾಮರಾಜನಗರ, ನ.8: ಜಿಲ್ಲೆಯಾದ್ಯಂತ ನ.10ರಂದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಅಧೀಕೃತವಾಗಿ ಏರ್ಪಡಿಸಿರುವ ಟಿಪ್ಪುಜಯಂತಿ ಹೊರತುಪಡಿಸಿ ಇನ್ನಾವುದೇ ಸಾರ್ವಜನಿಕ ಸಭೆ, ಖಾಸಗಿ ಸಮಾರಂಭ, ವಾಹನ ರ್ಯಾಲಿ, ಜಾಥಾ. ಪಾದಯಾತ್ರೆ, ಮೆರವಣಿಗೆ, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ರಾಮು ಬುಧವಾರ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ನ.10ರಂದು ಬೆಳಗ್ಗೆ 6ರಿಂದ ರಾತ್ರಿ10ರವರೆಗೆ ಯಾವುದೇ ಸಂಘಟನೆಗಳ ಆಯೋಜಕರು, ಕಾರ್ಯಕರ್ತರು, ಸದಸ್ಯರು ಬೈಕ್ ಇತ್ಯಾದಿ ವಾಹನಗಳ ಜಾಥಾ, ಸಾರ್ವಜನಿಕ ಸಭೆ, ಖಾಸಗಿ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿರುವ ಪ್ರಸ್ತಾವನೆ ಹಾಗೂ ಶಿಫಾರಸಿನ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸಲು ನಿಷೇಧಾಜ್ಞೆ ಹೊರಡಿಸುವುದು ಸೂಕ್ತವೆಂದು ತಮಗೆ ಮನವರಿಕೆಯಾಗಿರುವುದರಿಂದ ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ ಎಂದು ಡಿಸಿ ಬಿ.ರಾಮು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.





