ಸಿದ್ದರಾಮಯ್ಯ ತಲೆಹಿಡುಕರಂತೆ ಮಾತನಾಡುತ್ತಿದ್ದಾರೆ ಎಂದ ಯಡಿಯೂರಪ್ಪ!

ಪುತ್ತೂರು,ನ.9: ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಯಶಸ್ಸನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಹಿಡುಕರಂತೆ ಏನೇನೋ ಮಾತನಾಡುತ್ತಿದ್ದಾರೆ. ಅವರ ನಾಲಿಗೆ ಬಿಗಿ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಾಲಯಕ್ಕೆ ಗುರುವಾರ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ನಿಜ ಹೇಳಬೇಕೆಂದರೆ ಸಿದ್ದರಾಮಯ್ಯ ನಡೆಸಲು ಉದ್ದೇಶಿರುವ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸುವುದೇ ಅನುಮಾನ. ಪರಮೇಶ್ವರ್ ಅವರ ನಡೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತಿದೆ. ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಅವರ ಜತೆ ಯಾರೂ ಇಲ್ಲ. ಅದು ಬಿಜೆಪಿ ಯಾತ್ರೆ ಅಲ್ಲ, ಕೆಜೆಪಿ ಯಾತ್ರೆ ಎಂದು ಬಿಜೆಪಿ ನಾಯಕ ಸೊಗಡು ಶಿವಣ್ಣ ನೀಡಿದ ಹೇಳಿಕೆಯನ್ನೇ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಇದು ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.
ಸೊಗಡು ಶಿವಣ್ಣ ಈ ಹಿಂದೆಯೂ ತಪ್ಪು ಮಾಡಿದ್ದರು. ಮತ್ತೆ ಎಲ್ಲರೂ ಸೇರಿಕೊಂಡು ಜೊತೆಯಾಗಿ ಪಕ್ಷ ಕಟ್ಟೋಣ ಎಂದು ತೀರ್ಮಾನಿಸಿ ಜೊತೆಯಲ್ಲಿ ಕರೆದುಕೊಂಡು ಹೋದರೆ ಈಗ ಮತ್ತೆ ಅವರು ತಪ್ಪು ಮಾಡುತ್ತಿದ್ದಾರೆ. ಶಿವಣ್ಣ ಅವರ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ ಎಂದರು.
ಎಂಟು ದಿನಗಳ ಹಿಂದೆ ಆರಂಭವಾದ ಪರಿವರ್ತನಾ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಎಲ್ಲ ರ್ಯಾಲಿಗಳಲ್ಲೂ ಹತ್ತು ಸಾವಿರಕ್ಕೆ ಕಡಿಮೆ ಇಲ್ಲದಂತೆ ಜನ ಸೇರಿದ್ದಾರೆ. ನಮ್ಮ ಪಕ್ಷ ಅಷ್ಟೊಂದು ಬಲಶಾಲಿಯಲ್ಲದ ಹಾಸನ ಜಿಲ್ಲೆಯಲ್ಲೂ ಪರಿವರ್ತನಾ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಶುಕ್ರವಾರದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪರಿವರ್ತನಾ ಯಾತ್ರೆ ಮುಂದುವರಿಯಲಿದೆ ಎಂದ ಅವರು ನಮ್ಮ ಯಾತ್ರೆ ಯಶಸ್ಸಿಯಾಗಿಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು ಶುಕ್ರವಾರ ಪುತ್ತೂರಿಗೆ ಬಂದು ನೋಡಲಿ ಎಂದು ಸವಾಲು ಹಾಕಿದರು.
ರಾಜ್ಯದ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಗುರಿ ಕೊಟ್ಟಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತಿದ್ದೇವೆ. ರಾಜ್ಯದ ಜನತೆ ಬಿಜೆಪಿ ಕಡೆಗೆ ಒಲವು ಹೊಂದಿರುವುದು ಪರಿವರ್ತನಾ ಯಾತ್ರೆಯಿಂದ ಸ್ಪಷ್ಟವಾಗುತ್ತಿದೆ ಎಂದ ಅವರು, ಈ ಗುರಿ ಮುಟ್ಟುವ ವಿಶ್ವಾಸವಿದೆ. ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.
ನೋಟ್ ಬ್ಯಾನ್ ವಿಚಾರದಲ್ಲಿ ಕರಾಳ ದಿನಾಚರಣೆ ಮಾಡುವ ಕಾಂಗ್ರೆಸಿಗರು ಮೂರ್ಖರು ಎಂದು ಬಣ್ಣಿಸಿದ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪುತ್ತೂರು ಜಿಲ್ಲೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಜಿ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸುನಿಲ್ ಅಲ್ಯಾಪುರ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು,ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪಕ್ಷದ ಮುಖಂಡರಾದ ಡಾ.ಎಂ.ಕೆ.ಪ್ರಸಾದ್, ರಾಜೇಶ್ ಬನ್ನೂರು,ಅರುಣ್‍ಕುಮಾರ್ ಪುತ್ತಿಲ ಮತ್ತಿತರರು ಇದ್ದರು.
ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಗುರುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ದೇವಾಲಯದ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಅವರು ಶಾಲು ಹೊದಿಸಿ ಗೌರವಿಸಿದರು.







