ಪ್ರವಾಸೋದ್ಯಮ,ಟುನಾ ಮೀನುಗಾರಿಕೆ ಉತ್ತೇಜನಕ್ಕೆ ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಚಿಂತನೆ

ಹೊಸದಿಲ್ಲಿ,ನ.9: ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಮತ್ತು ಟುನಾ ಮೀನುಗಾರಿಕೆ ಕೈಗಾರಿಕೆಯನ್ನು ಉತ್ತೇಜಿಸಲು ನೂತನ ವಿಮಾನ ನಿಲ್ದಾಣ ಸ್ಥಾಪನೆಗೆ ದ್ವೀಪ ಅಭಿವೃದ್ಧಿ ಸಂಸ್ಥೆ(ಐಡಿಎ)ಯು ನಿರ್ಧರಿಸಿದೆ.
ಬುಧವಾರ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಐಡಿಎದ ಎರಡನೇ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಂಡಮಾನ- ನಿಕೋಬಾರ್ ದ್ವೀಪಸಮೂಹದ ದಿಗ್ಲಿಪುರ ಸಮೀಪದ ಶಿಬ್‌ಪುರದಲ್ಲಿಯ ನೌಕಾಪಡೆಯ ವಾಯುನೆಲೆಯನ್ನು ಜಂಟಿ ಬಳಕೆಯ ವಿಮಾನ ನಿಲ್ದಾಣವನ್ನಾಗಿ ಬಳಸಿಕೊಳ್ಳಲಾಗುವದು ಎಂದು ನಿರ್ಧಾರದಲ್ಲಿ ಹೇಳಲಾಗಿದೆ.
ಐಡಿಎದ ಈ ನಿರ್ಧಾರದಿಂದ ಲಕ್ಷದ್ವೀಪದಲ್ಲಿ ಜನರ ಜೀವನೋಪಾಗಳಲ್ಲಿ ಸುಧಾರಣೆಗೆ ನೆರವಾಗಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಲ್ಲಿ ಟುನಾ ಮೀನುಗಾರಿಕೆ ಕೈಗಾರಿಕೆಯನ್ನು ಉತ್ತೇಜಿಸುವ ಅಗತ್ಯಕ್ಕೆ ಒತ್ತು ನೀಡಿರುವ ಅದು, ಲಕ್ಷದ್ವೀಪದಲ್ಲಿ ಪ್ರಗತಿಯಲ್ಲಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಮತ್ತು ಸ್ಥಳೀಯ ಪಾಲುದಾರರೊಂದಿಗೆ ಸಮಾಲೋಚಿಸಿ ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವಂತೆ ಸಂಬಂಧಿಸಿದ ಎಲ್ಲರಿಗೂ ಗೃಹಸಚಿವರು ನಿರ್ದೇಶ ನೀಡಿದ್ದಾರೆ ಎಂದು ತಿಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್‌ನ ನಾಲ್ಕು ಮತ್ತು ಲಕ್ಷದೀಪದ ಐದು ದ್ವೀಪಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಯೋಜನೆಗಳ ಪುನರ್‌ಪರಿಶೀಲನೆ ಯನ್ನೂ ಸಭೆಯು ನಡೆಸಿತು
ದ್ವೀಪಗಳ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಪರಾಮರ್ಶೆಯ ಬಳಿಕ ಕಳೆದ ಜೂ.1ರಂದು ಐಡಿಎ ಅನ್ನು ಸ್ಥಾಪಿಸಲಾಗಿತ್ತು.







