ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸಗಳ ಮೇಲೆ 2ನೆ ದಿನವೂ ಮುಂದುವರಿದ ಐಟಿ ರೈಡ್
ಬೆಂಗಳೂರಿನಲ್ಲಿಯೂ ತಪಾಸಣೆ
ಶಿವಮೊಗ್ಗ, ನ.9: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಹಾಗೂ ಬ್ಯಾಂಕ್ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥಗೌಡ ನಿವಾಸಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ತಪಾಸಣೆ ಎರಡನೆ ದಿನವಾದ ಗುರುವಾರವೂ ಮುಂದುವರಿದಿದೆ.
ಈ ನಡುವೆ ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಕಚೇರಿಯಲ್ಲಿಯೂ ಐಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ, ಕೆಲ ದಾಖಲೆ ಪತ್ರ ವಶಕ್ಕೆ ಪಡೆದುಕೊಂಡಿರುವ ಮಾಹಿತಿ ತಿಳಿದು ಬಂದಿದೆ.
ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬುಧವಾರ ಬೆಳಗ್ಗೆಯಿಂದ ತಪಾಸಣೆ ಆರಂಭಿಸಿದ್ದ ಐಟಿ ಅಧಿಕಾರಿಗಳ ತಂಡ ತಡರಾತ್ರಿಯವರೆಗೂ ಶೋಧ ನಡೆಸಿತ್ತು. ಗುರುವಾರ ಬೆಳಗ್ಗೆಯಿಂದ ಮತ್ತೆ ಕಚೇರಿಯಲ್ಲಿ ತಪಾಸಣೆ ಮುಂದುವರಿಸಿದ್ದು, ಹಲವು ದಾಖಲೆ ಪತ್ರಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹಾಗೆಯೇ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಕರಕುಚ್ಚಿ ಗ್ರಾಮದಲ್ಲಿರುವ ಮಂಜುನಾಥಗೌಡರವರ ಮನೆಯಲ್ಲಿಯೂ ಎರಡನೆ ದಿನವೂ ಐಟಿ ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದಾರೆ. ಸತತ ಎರಡನೇ ದಿನವೂ ತಪಾಸಣೆ ಮುಂದುವರಿದಿದ್ದರೂ ದಾಳಿಯ ಕುರಿತಂತೆ ಅಧಿಕೃತವಾಗಿ ಐಟಿ ಇಲಾಖೆಯು ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ.
ನಿಗೂಢವಾಗಿದೆ ಕಾರಣ: ಆರ್.ಎಂ.ಮಂಜುನಾಥಗೌಡರವರ ನಿವಾಸಗಳು ಹಾಗೂ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಮೇಲೆ ಐಟಿ ದಾಳಿ ನಡೆಯಲು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಐ.ಟಿ. ಅಧಿಕಾರಿಗಳು ಇಂಧನ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಪೆಕ್ಸ್ ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ದಾಖಲಾತಿಗಳು ಲಭ್ಯವಾಗಿತ್ತು ಎನ್ನಲಾಗಿದೆ.
ಆರ್.ಎಂ.ಮಂಜುನಾಥಗೌಡ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ಉತ್ತರ ಕರ್ನಾಟಕದ ಕಾಂಗ್ರೆಸ್ ಮುಖಂಡರೊಬ್ಬರ ಸಕ್ಕರೆ ಕಾರ್ಖಾನೆಗೆ ನೂರಾರು ಕೋಟಿ ರೂ. ಮೊತ್ತದ ಸಾಲ ಮಂಜೂರು ಮಾಡಿದ್ದ ದಾಖಲೆ ಪತ್ರಗಳು ಇದ್ದವು ಎನ್ನಲಾಗಿದೆ. ಈ ಕಾರಣದಿಂದಲೇ ಐಟಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇವ್ಯಾವ ಅಂಶಗಳು ಖಚಿತವಾಗುತ್ತಿಲ್ಲ. ದಾಳಿಯೂ ಸಂಪೂರ್ಣ ನಿಗೂಢವಾಗಿದ್ದು, ಐಟಿ ಇಲಾಖೆಯ ಅಧೀಕೃತ ಮಾಹಿತಿಯ ನಂತರವಷ್ಟೆ ದಾಳಿಗೆ ಕಾರಣವೇನು ಎಂಬುವುದು ಖಚಿತವಾಗಬೇಕಾಗಿದೆ.







