ಪುತ್ತೂರು ಪತ್ರಕರ್ತರ ಪ್ರತಿಭಟನೆ 6ನೇ ದಿನಕ್ಕೆ ಮುಂದುವರಿಕೆ

ಪುತ್ತೂರು,ನ.9: ಸುಳ್ಳು ಕೇಸು ಮತ್ತು ಸುಳ್ಳು ಸಾಕ್ಷಿ ನೀಡಿ ಅಮಾಯಕರಾದ ನಮ್ಮ ಮೇಲೆ ಕೇಸು ನಡೆಸಲಾಗಿದೆ ಎಂದು ಆರೋಪಿಸಿ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಮೂವರು ವರದಿಗಾರರು ನಡೆಸುತ್ತಿರುವ ಪ್ರತಿಭಟನೆ ಗುರವಾರ 6ನೇ ದಿನಕ್ಕೆ ಮುಂದುವರಿದಿದೆ.
ಪುತ್ತೂರಿನ ಸ್ಥಳೀಯ ಪತ್ರಿಕೆ ಸುದ್ದಿ ಬಿಡುಗಡೆಯ ವರದಿಗಾರರಾಗಿರುವ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾದ ಲೋಕೇಶ್ ಬನ್ನೂರು, ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ ಮತ್ತು ನಾರಾಯಣ ನಾಯ್ಕ ಅಮ್ಮುಂಜೆ ಅವರು ಪತ್ರಿಕಾ ಭವನದ ಬಳಿ ಧರಣಿ ಪ್ರತಿಭಟನೆ ನಡೆಸುತ್ತಾ ತಮ್ಮ ಮೇಲಾಗುತ್ತಿರುವ ಅನ್ಯಾಯ ಮತ್ತು ಅಪಪ್ರಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಬಲ ಯಾಚಿಸುತ್ತಿದ್ದಾರೆ.
ಪ್ರತಿಭಟನಾ ನಿರತರ ಮೇಲೆ ಕೆಲವರಿಂದ ಆಗುತ್ತಿರುವ ಸುಳ್ಳು ಕೇಸುಗಳನ್ನು ಮತ್ತು ಅಪಪ್ರಚಾರಗಳನ್ನು ವಿರೋಧಿಸಿ ಮತ್ತು ನಾವು ನಿರಪರಾಧಿಗಳೆಂದು ಸಾಬೀತುಪಡಿಸುವ ಸಲುವಾಗಿ ಕಳೆದ 6 ದಿನಗಳಿಂದ ಪುತ್ತೂರು ಪತ್ರಿಕಾಭವನದ ಬಳಿ ಪತ್ರಕರ್ತರ ಸಂಘದ ಸದಸ್ಯರ ಮತ್ತು ಜನತಾ ನ್ಯಾಯಾಲಯದ ಬೆಂಬಲ ಯಾಚಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪುತ್ತೂರಿನ ಪ್ರೆಸ್‍ಕ್ಲಬ್ ಮುಂಬಾಗದಲಿ ನಡೆದ ಘಟನೆಗೆ ಸಂಬಂಧಿಸಿ ನಾವು ನಿರಪರಾಧಿಗಳಾಗಿದ್ದು ನಮ್ಮ ವಿರುದ್ದ ಸುಳ್ಳು ದೂರು ನೀಡಲಾಗಿದೆ. ಅಲ್ಲದೆ ವಾಟ್ಸಪ್ ಮತ್ತು ಫೇಸ್‍ಬುಕ್ ಮೂಲಕ ನಮ್ಮ ವಿರುದ್ದ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿರುವ ಅವರು ನಮ್ಮ ಮೇಲೆ ಸುಳ್ಳು ಕೇಸು ನೀಡಿರುವ ಪ್ರದೀಪ್‍ಕುಮಾರ್ ಅವರು ಸಾಕ್ಷಿದಾರರಿಗೆ ಬೆದರಿಕೆ ಎಂದು ಮತ್ತೊಂದು ದೂರನ್ನು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.







