ಮೌಲ್ಯಯುತ ಸಮಾಜ ನಿರ್ಮಿಸಲು ಸಂತೋಷ್ ಹೆಗ್ಡೆ ಕರೆ
ಬೆಂಗಳೂರು, ನ.9: ಇಂದಿನ ಯುವಪೀಳಿಗೆ ಭ್ರಷ್ಟಾಚಾರ, ವಂಚನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮೂಲಕ ವೌಲ್ಯಯುತ ಸಮಾಜವನ್ನು ಕಟ್ಟಲು ಪಣತೊಡಬೇಕು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.
ಭಾರತೀಯ ಸಂಸ್ಕೃತಿ ವಿದ್ಯಾಪೀಠದ ವಜ್ರ ಮಹೋತ್ಸವದ ಅಂಗವಾಗಿ ಗಾಯನ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಮೌಲ್ಯಗಳು ಸಂಪೂರ್ಣ ನಶಿಸುತ್ತಿವೆ. ಇಂತಹ ಸಮಾಜದಲ್ಲಿ ಯುವಕರು ಯಾವ ರೀತಿ ಬಾಳುತ್ತಾರೆ ಎಂಬುದು ಆತಂಕಕಾರಿ ವಿಚಾರ ಎಂದು ಹೇಳಿದರು.
ಭವಿಷ್ಯದ ಮಕ್ಕಳು ಭ್ರಷ್ಟರು, ದರೋಡೆಕೋರರನ್ನು ಬಹಿಷ್ಕರಿಸಿ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ. ಯುವ ಜನತೆಯಿಂದ ಮಾತ್ರ ಸಮಾಜ ಬದಲಿಸಲು ಸಾಧ್ಯ ಎಂದ ಅವರು, ಕಾನೂನು ಚೌಕಟ್ಟಿನಲ್ಲಿ ಹಣ ಸಂಪಾದಿಸಬಹುದು. ಆದರೆ, ಭ್ರಷ್ಟಾಚಾರದಿಂದ ಅದನ್ನು ಗಳಿಸಿದರೆ ಅಪರಾಧ. ಹೀಗಾಗಿ ನ್ಯಾಯಯುತ ದಾರಿಯಲ್ಲಿ ನಡೆಯಿರಿ ಎಂದು ಸಲಹೆ ನೀಡಿದರು.
ರಾಜಕಾರಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಾನವನಲ್ಲಿ ದುರಾಸೆ ಹೆಚ್ಚುತ್ತಿದೆ. ಹೀಗಾಗಿ ಭ್ರಷ್ಟರ ಸಂಖ್ಯೆ ಹೆಚ್ಚುತ್ತಿದೆ. ಇಂದಿನ ಸಮಾಜ ಅಧಿಕಾರ ಹಾಗೂ ಹಣವನ್ನು ಪೂಜಿಸುವ ಹಂತಕ್ಕೆ ತಲುಪಿದೆ. ಮಾನವೀಯತೆ ಸಂಪೂರ್ಣ ಮರೆಯಾಗಿದೆ. ಇಂತಹ ಸಮಾಜದಲ್ಲಿನ ಜನರಿಂದ ಉತ್ತಮ ಮೌಲ್ಯ ನಿರೀಕ್ಷಿಸುವುದು ಕಷ್ಟದ ಕೆಲಸ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಂತ್ರಾಲಯದ ರಾಘವೇಂದ್ರ ಮಠದ ಪೀಠಾಧಿಪತಿ ಸುಬಧೇಂದ್ರ ತೀರ್ಥ ಸ್ವಾಮೀಜಿ, ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಸಹ ಸಂಸ್ಥಾಪಕಿ ಕೆ.ಎನ್. ಪುಟ್ಟಮ್ಮ, ಬಿಎಸ್‌ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ರಂಗನಾಥಭಾರದ್ವಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







