ಪೊಲೀಸರ ಮೇಲೆ ಹಲ್ಲೆಗೆ ಯತ್ನ ಆರೋಪ: ಗುಂಡು ಹಾರಿಸಿ ಆರೋಪಿಯ ಬಂಧನ
ಬೆಂಗಳೂರು, ನ.9: ಯುವಕರ ಗುಂಪು ಕಟ್ಟಿಕೊಂಡು ದಾಂಧಲೆ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ವಶಕ್ಕೆ ಪಡೆಯಲು ಹೋಗಿದ್ದ್ದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ ಕಾರಣ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ನಾಗಸಂದ್ರದ ವಿಷ್ಣು ಯಾನೆ ಭೋಜ(24) ಎಂದು ಪೊಲೀಸರು ಗುರುತಿಸಿದ್ದು, ಇಂದು ಮುಂಜಾನೆ ನಗರದ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೆನ್ನಟ್ಟಿ ಬಂದ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಕಾರಣ ಪೊಲೀಸರು ಆತನ ಎಡಗಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.
ಅದೇ ರೀತಿ, ಆರೋಪಿಯ ಜೊತೆಗಿದ್ದ ಆತನ ಸಹಚರರಾದ ನಾಗಸಂದ್ರದ ಪ್ರಮೋದ್, ಶಶಾಂಕ್, ಸಿದ್ದರಾಜ್ ಸೇರಿ ಐವರನ್ನು ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿಷ್ಣು ಗುಂಪು ಕಟ್ಟಿಕೊಂಡು ಮದ್ಯ ಸೇವಿಸಿ ದಾಂಧಲೆ ಮಾಡುತ್ತಾ ಬನಶಂಕರಿಯ ಯಡಿಯೂರು ಕೆರೆ ಸಮೀಪ ಮೂರು ಕಾರು-ಆಟೊಗಳ ಗಾಜು ಗಳನ್ನು ಜಖಂಗೊಳಿಸಿ ವಿಕೃತ ವರ್ತನೆ ತೋರುತ್ತಿದ್ದು, ಬನಶಂಕರಿ ಬಸವನಗುಡಿಯ ಸುತ್ತಮುತ್ತ ಪುಂಡಾಟಿಕೆ ನಡೆಸಿದ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ಸ್ಥಳೀಯರಾದ ಆನಂದ್, ನೂತನ್ ಗೌಡ ಎಂಬವರ ಮೇಲೆ ಆರೋಪಿ ವಿಷ್ಣು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಲು ಬೆನ್ನಟ್ಟಿದ ವೇಳೆ ತಪ್ಪಿಸಿಕೊಳ್ಳಲು ಮದ್ಯದ ಅಮಲಿನಲ್ಲಿ ಇನ್ ಸ್ಪೆಕ್ಟರ್ ಶೇಖರ್ ಮತ್ತು ಪುಟ್ಟಸ್ವಾಮಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಶರಣಾಗುವಂತೆ ಸೂಚಿಸಿದರೂ ಕಿವಿಗೂಡದೆ ಮುನ್ನುಗಿದಾಗ ಸ್ವಯಂ ರಕ್ಷಣೆಗೆ ಇನ್ ಸ್ಪೆಕ್ಟರ್ ಶೇಖರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದಾಗ ಒಂದು ಗುಂಡು ವಿಷ್ಣು ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ವಿಷ್ಣು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಇನ್ ಸ್ಪೆಕ್ಟರ್ ಪುಟ್ಟಸ್ವಾಮಿ ಅವರಿಗೂ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷ್ಣು ವಿರುದ್ಧ ಎರಡು ಕೊಲೆಯತ್ನ ಸೇರಿದಂತೆ ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







