ಸಚಿವ ರೈಯಿಂದ ಪತ್ನಿ ಹೆಸರಲ್ಲಿ ಅಕ್ರಮ ಸರಕಾರಿ ಜಮೀನು: ಆರೋಪ
ಕ್ರಿಮಿನಲ್ ಕೇಸು ದಾಖಲಿಸಲು ಹರಿಕೃಷ್ಣ ಬಂಟ್ವಾಳ್ ಪುನರುಚ್ಚಾರ

ಮಂಗಳೂರು, ನ.9: ಅಕ್ರಮ ಸಕ್ರಮ ನಿಯಮ ಉಲ್ಲಂಘಿಸಿ ಪತ್ನಿ ಹೆಸರಿನಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಸರಕಾರಿ ಜಮೀನು ಪಡೆದುಕೊಂಡಿದ್ದಾರೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿರುವ ಕಾಂಗ್ರೆಸ್‌ನ ಮಾಜಿ ನಾಯಕ ಹರಿಕೃಷ್ಣ ಬಂಟ್ವಾಳ್ ಸಚಿವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಭೂ ಕಬಳಿಕೆ ವಿರುದ್ಧ ತಾನು ಕಳೆದ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಹಿತ ಗಂಭೀರ ಆರೋಪ ಮಾಡಿದ್ದೇನೆ. ಉಸ್ತುವಾರಿ ಸಚಿವರು ಈ ಬಗ್ಗೆ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಾನು ಸುಳ್ಳು ಆರೋಪ ಹೊರಿಸಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದಲ್ಲಿ 3.04 ಜಾಗ (ಸರ್ವೆ ನಂ.20/2ರ ಪೈಕಿ 2.04 ಎಕರೆ ಮತ್ತು ಸರ್ವೆ ನಂ.38/2ರಲ್ಲಿ 1 ಎಕರೆ) ವನ್ನು ರಮಾನಾಥ ರೈ ಪತ್ನಿ ಶೈಲಾ ಆರ್.ರೈಯವರ ಹೆಸರಿನಲ್ಲಿ ಮಂಜೂರು ಮಾಡಲಾಗಿದೆ. ಈ ಸಂದರ್ಭ ಶೈಲಾ ಆರ್. ರೈ ಕುಟುಂಬದ ವಾರ್ಷಿಕ ಆದಾಯ ಕೇವಲ ಆರು ಸಾವಿರ ರೂ. ಎಂದು ನಮೂದಿಸಲಾಗಿದೆ. ಆದರೆ ಆ ಸಂದರ್ಭ ಎಸ್.ಎಂ. ಕೃಷ್ಣ ಅವರ ಸರಕಾರದಲ್ಲಿ ರೈ ಮಂತ್ರಿಯಾಗಿದ್ದರು. ಬಂಟ್ವಾಳದಲ್ಲಿ ಬೆಸ್ಟ್ ಇಂಗ್ಲಿಷ್ ಮಾಧ್ಯಮ ಶಾಲೆ ನಡೆಸುತ್ತಿದ್ದರು ಎಂದು ದೂರಿದರು.
ಕಳ್ಳಿಗೆ ಗ್ರಾಮದ ಸರ್ವೆ ನಂಬ್ರ 97/1ರಲ್ಲಿ ಸರಕಾರದ 30 ಎಕರೆ ಜಮೀನಿನಲ್ಲಿ 10 ಎಕರೆ ಭೂಮಿಯಲ್ಲಿ ಅಕ್ರಮವಾಗಿ ರಬ್ಬರ್ ತೋಟ ಬೆಳೆಸಲಾಗಿದೆ. ನೀರಾವರಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಜಮೀನು ಸಚಿವ ರೈ ಕುಟುಂಬದ ಹೆಸರಿನಲ್ಲಿದೆ ಎನ್ನುವುದಕ್ಕೆ ತನ್ನಲ್ಲಿ ಪುರಾವೆಗಳಿಲ್ಲ. ಜಿಲ್ಲಾಧಿಕಾರಿ ಈ ಸ್ಥಳಕ್ಕೆ ಭೇಟಿ ನೀಡಿ ಈ ಜಾಗ ಯಾರಿಗೆ ಸೇರಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದವರು ಒತ್ತಾಯಿಸಿದರು.
ನ.11ರಂದು ಬಿಜೆಪಿ ಸೇರ್ಪಡೆ
ನಗರದ ನೆಹರೂ ಮೈದಾನದಲ್ಲಿ ನ.11ರಂದು ನಡೆಯುವ ಬಿಜೆಪಿ ಪರಿವರ್ತನಾ ಸಭೆಯಲ್ಲಿ ತಾನು ಬಿಜೆಪಿ ಸೇರ್ಪಡೆಗೊಳ್ಳಲಿದ್ದೇನೆ. ಇದಕ್ಕೂ ಮೊದಲು ಬಂಟ್ವಾಳದಲ್ಲಿ ನಡೆಯುವ ಸಭೆಯಲ್ಲಿ ತನ್ನ ಸಾವಿರಾರು ಬೆಂಬಲಿಗರು ಬಿಜೆಪಿ ಸೇರಲಿದ್ದಾರೆ ಎಂದವರು ಹೇಳಿದರು.
ಕ್ರೈಸ್ತರು ಮಾತನಾಡಲಿ: ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಮಂಗಳೂರಿನ ಚರ್ಚ್‌ಗಳ ನಾಶ, ಕ್ರಿಶ್ಚಿಯನರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ನಡೆಸಿದ್ದು ಹಾಗೂ ಟಿಪ್ಪು ನಡೆಸಿದ ಕ್ರೌರ್ಯದ ಕುರಿತು ಜಿಲ್ಲಾಡಳಿತ ಪ್ರಕಟಿಸಿದ 'ಮಂಗಳೂರು ದರ್ಶನ'ದಲ್ಲಿ ದಾಖಲಾಗಿದೆ. ಮಂಗಳೂರು ಬಿಷಪ್, ಕ್ರಿಶ್ಚಿಯನ್ ಜನಪ್ರತಿನಿಧಿಗಳು ಹಾಗೂ ಇತರ ಕ್ರಿಶ್ಚಿಯನ್ನರು ಈ ಬಗ್ಗೆ ಮಾತನಾಡಬೇಕು ಎಂದವರು ಆಗ್ರಹಿಸಿದರು.







