ಕಾಂಗ್ರೆಸ್ ಯಾವುದೇ ‘ಯಾತ್ರೆ’ ನಡೆಸುವುದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಬಾಗಲಕೋಟೆ, ನ.9: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಹಾಗೂ ವೈಯಕ್ತಿಕವಾಗಿ ತಾವು ರಾಜ್ಯದಲ್ಲಿ ಯಾವುದೇ ಯಾತ್ರೆ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ನಡೆದ ಇಂಚಗೇರಿ ಸಂಪ್ರದಾಯದ ಸಂಗಮನಾಥ ಮಹಾರಾಜರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೆ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಕಾರ್ಯಕ್ರಮ ಹಾಸ್ಯಾಸ್ಪದ ಎಂಟು ಟೀಕಿಸಿದರು.
ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲಮನ್ನಾ ಮಾಡುವಂತೆ ಒತ್ತಾಯಿಸಿರುವ ಬಿಜೆಪಿ ಮುಖಂಡರು ಕೇಂದ್ರ ಸರಕಾರದ ವಿರುದ್ಧ ಸಂಸತ್ತಿಗೆ ಮುತ್ತಿಗೆ ಹಾಕಬೇಕೆಂದು ಲೇವಡಿ ಮಾಡಿದ ಅವರು, ರೈತರ ಸಾಲಮನ್ನಾ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ: ರಾಜ್ಯದ ಜನತೆ ಅಧಿಕಾರ ಕೊಟ್ಟಾಗ ಏನೂ ಮಾಡದವರು ಈಗ ಪರಿವರ್ತನೆ, ಕುಮಾರ ಪರ್ವ ಹೆಸರಿನಲ್ಲಿ ಯಾತ್ರೆ ಹೊರಟಿದ್ದಾರೆ ಎಂದು ಸಿದ್ದರಾಮಯ್ಯ, ಬಿಜೆಪಿ ಹಾಗೂ ಜೆಡಿಎಸ್ ಯಾತ್ರೆಗಳನ್ನು ಟೀಕಿಸಿದರು.
ಸಿದ್ದರಾಮಯ್ಯನವರಿಗೆ ಜೆಡಿಎಸ್ ಎಲ್ಲವನ್ನು ಕೊಟ್ಟಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ತಾನು ಜೆಡಿಎಸ್ ಅಧ್ಯಕ್ಷನಾಗಿ ಆರು ವರ್ಷ ಕಾಲ ಆ ಪಕ್ಷ ಕಟ್ಟುವ ಕೆಲಸ ಮಾಡಿದ್ದೆ. ಆದರೆ, ಅಪ್ಪ-ಮಕ್ಕಳು ಸೇರಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ನಾನಾಗಿಯೇ ಆ ಪಕ್ಷ ಬಿಡಲಿಲ್ಲ ಎಂಬುದನ್ನು ಅವರು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.







