ನ್ಯಾಯಾಂಗ ನೇಮಕ: ನಿಯಮಾವಳಿ ಅಂತಿಮಗೊಳಿಸಲು ವಿಳಂಬ
ಕೇಂದ್ರದ ಪ್ರತಿಕ್ರಿಯೆ ಕೋರಿದ ಮನವಿ ತಿರಸ್ಕರಿಸಿದ ಸುಪ್ರೀಂ

ಚೆನ್ನೈ, ನ. 9: ನ್ಯಾಯಾಧೀಶರ ನೇಮಕಾತಿ ಕುರಿತ ನಿಯಮಾವಳಿ ಗಳನ್ನು ಅಂತಿಮಗೊಳಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ನಿಯಮಾವಳಿಗಳನ್ನು ಅಂತಿಮಗೊಳಿಸಿಲ್ಲ ಯಾಕೆ ಎಂದು ಪ್ರಶ್ನಿಸಿ ನ್ಯಾಯವಾದಿ ಆರ್.ಪಿ. ಲೂಥ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ ಹಿನ್ನೆಲೆಯಲ್ಲಿ ಇಬ್ಬರು ಸದಸ್ಯರ ಪೀಠ ಕೇಂದ್ರ ಸರಕಾರಕ್ಕೆ ನೊಟೀಸು ಜಾರಿ ಮಾಡಿರುವುದನ್ನು ಮೂವರು ಸದಸ್ಯರ ಪೀಠ ನೆನಪಿಸಿತು.
ಸಣ್ಣ ಪೀಠದ ಆದೇಶ ದೋಷಪೂರ್ಣವಾಗಿರುವುದನ್ನು ಗುರುತಿಸಿರುವ ಪೀಠ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕಾನೂನು ರೂಪಿಸಿರುವುದರಿಂದ ಈ ಮನವಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರಸ್ತುತ ಏಳು ಉಚ್ಚನ್ಯಾಯಾಲಯಗಳಲ್ಲಿ ಪ್ರಭಾರ ಮುಖ್ಯ ನ್ಯಾಯಮೂರ್ತಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ಕೆಲವರು ತಿಂಗಳುಗಳ ಕಾಲ ಮುಂದುವರಿದ್ದಾರೆ. ಪೀಠ, ನ್ಯಾಯವಾದಿ ಲುಥ್ರಾ ಹಾಗೂ ಸಣ್ಣ ಪೀಠ ನಿಯೋಜಿಸಿದ ಆ್ಯಮಿಕಸ್ ಕ್ಯೂರಿ ಕೆ.ವಿ. ವಿಶ್ವನಾಥನ್ ಅವರ ನಡುವೆ ವಾದ-ವಿವಾದಗಳಿಗೆ ವಿಚಾರಣೆ ಸಾಕ್ಷಿಯಾಯಿತು. ವಿಳಂಬವಾಗಿದೆ ಎಂಬ ಭಾವನೆ ಈಗ ಇದೆ. ಉಚ್ಚ ನ್ಯಾಯಾಲಯದಲ್ಲಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆ ಆಘಾತ ಉಂಟು ಮಾಡುತ್ತದೆ ಎಂದು ವಿಶ್ವನಾಥನ್ ಪೀಠಕ್ಕೆ ತಿಳಿಸಿದರು.
ಆದರೆ, ಈ ವಾದವನ್ನು ಒಪ್ಪದ ಪೀಠ, ನಾವು ಯಾವೆಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂಬುದು ನಿಮಗೆ ಗೊತ್ತಿಲ್ಲ ಹಾಗೂ ಇಲ್ಲಿ ಅದನ್ನು ಹೇಳುವ ಉದ್ದೇಶ ಕೂಡ ನಮಗಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿಯೋಜನೆ ಸಂದರ್ಭ ನಿಮ್ಮನ್ನು ಪರಿಗಣಿಸಿಲ್ಲ ಎಂಬುದು ನಿಮ್ಮ ದುಃಖಕ್ಕೆ ಕಾರಣವಿರಬಹುದು. ಆದರೆ, ನೀವು ನ್ಯಾಯಾಲಯದ ಮುಂದೆ ವಾದಿಸಲು ಬಂದಿರುವಿರಿ ಎಂದು ಪೀಠ ಹೇಳಿದೆ.







