ಕುಂದಾಪುರ : ವೈದ್ಯಾಧಿಕಾರಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ಸಿಬ್ಬಂದಿಗಳ ಪ್ರತಿಭಟನೆ
ಕುಂದಾಪುರ ಸರಕಾರಿ ಆಸ್ಪತ್ರೆ ನರ್ಸ್‌ಗೆ ನಿಂದನೆ ಆರೋಪ

ಕುಂದಾಪುರ, ನ.9: ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿ ಕಾರಿ ಡಾ.ರಾಬರ್ಟ್ ರೆಬೆಲ್ಲೋ ನರ್ಸ್ ಒಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವುದಾಗಿ ಆರೋಪಿಸಿ ಗುರುವಾರ ಆಸ್ಪತ್ರೆಯ ಎಲ್ಲ ನರ್ಸ್ ಹಾಗೂ ಸಿಬಂದಿಗಳು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಗ್ರೇಡ್ ಒನ್ ನರ್ಸಿಂಗ್ ಸುಪರಿಂಡೆಂಟ್ ಪುಷ್ಪಾ ಅವರಿಗೆ ನ.6 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕರೆ ಮಾಡಿದ ಡಾ.ರಾಬರ್ಟ್ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ತಡರಾತ್ರಿಯಾಗಿರುವುದರಿಂದ ಈ ವೇಳೆ ಅವರೊಂದಿಗೆ ಅವರ ಪತಿ ಕೂಡ ಆಸ್ಪತ್ರೆಗೆ ಬಂದಿದ್ದರು. ಆಗ ವೈದ್ಯಾಧಿಕಾರಿಗಳು ಪುಷ್ಪಾ ಹಾಗೂ ಅವರ ಪತಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವುದಾಗಿ ಆರೋಪಿಸಲಾಗಿದೆ.
ಇದನ್ನು ವಿರೋಧಿಸಿ ಮತ್ತು ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ಅವರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ಆಸ್ಪತ್ರೆಯ ಎಲ್ಲ 29 ನರ್ಸ್‌ಗಳು ಹಾಗೂ 21 ಮಂದಿ ಗ್ರೂಪ್ ಡಿ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ‘ಇದು ಕೇವಲ ಒಬ್ಬ ನರ್ಸ್‌ಗೆ ಆದ ಅನ್ಯಾಯವಲ್ಲ. ಇವರು ಅಧಿಕಾರ ವಹಿಸಿಕೊಂಡ ಕಳೆದ ನಾಲ್ಕೈದು ತಿಂಗಳುಗಳಿಂದ ಎಲ್ಲ ನರ್ಸ್‌ಗಳನ್ನು ಅನೇಕ ಬಾರಿ ನಿಂದಿಸಿದ್ದಾರೆ. ಆದುದರಿಂದ ಅವರನ್ನು ಇಲ್ಲಿಂದ ವರ್ಗಾಯಿಸಬೇಕು ಎಂದು ಆಸ್ಪತ್ರೆಯ ನರ್ಸ್‌ಗಳು ಆಗ್ರಹಿಸಿದರು.
‘ಈ ಆಸ್ಪತ್ರೆಯ ಸಿಬಂದಿಗಳ ವರ್ತನೆ ಬಗ್ಗೆ ಅನೇಕ ದೂರುಗಳಿದ್ದು, ಅದ ರಂತೆ ನಾನು ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲರಲ್ಲೂ ಶಿಸ್ತು ಪಾಲಿಸುವಂತೆ ಸೂಚನೆ ನೀಡಿದ್ದೇನೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿ, ಮುಖ್ಯ ನರ್ಸ್ ನೊಂದಿಗೆ ಎಲ್ಲ ವಾರ್ಡ್‌ಗಳಿಗೆ ಭೇಟಿ ಕೊಡುವ ‘ಮಿಡ್‌ನೈಟ್ ಹೆಡ್‌ಕೌಂಟ್’ ಎಂಬ ಕ್ರಮ ಇದ್ದು, ಅದಕ್ಕಾಗಿ ಪುಷ್ಪಾ ಅವರನ್ನು ರಾತ್ರಿ ವೇಳೆ ಆಸ್ಪತ್ರೆಗೆ ಬರಲು ತಿಳಿಸಿದ್ದೆ. ಆಗ ಅಲ್ಲಿಗೆ ಬಂದ ಪುಷ್ಪಾ ಅವರ ಪತಿ, ಮಧ್ಯರಾತ್ರಿ ಪುಷ್ಪಾ ಅವರನ್ನು ಕರೆಸಿರುವ ಬಗ್ಗೆ ದರ್ಪದಿಂದ ಪ್ರಶ್ನಿಸಿದರು. ಈ ಬಗ್ಗೆ ನಾನು ಪೊಲೀಸರಿಗೂ ದೂರು ಕೊಡಲು ಮುಂದಾಗಿದ್ದೆ. ಆದರೆ ಪುಷ್ಪಾ ಈ ಬಗ್ಗೆ ಕ್ಷಮೆ ಕೇಳಿದ್ದರು. ಆದರೆ ಈಗ ನನ್ನ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವೈದ್ಯಾಧಿ ಕಾರಿ ಡಾ.ರಾಬರ್ಟ್ ರೆಬೆಲ್ಲೋ ಸ್ಪಷ್ಟಪಡಿಸಿದರು.
‘ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ನರ್ಸ್ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಾಲೂಕು ನೋಡಲ್ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. ಆ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಲ್ಯಾಣಾ ಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.







