ತಾಕತ್ತಿದ್ದರೆ ತನ್ನ ಆರೋಪಗಳಿಗೆ ನೇರ ಉತ್ತರ ನೀಡಿ ; ಶಾಸಕಿ ಶಕುಂತಳಾ ಶೆಟ್ಟಿಗೆ ಪುರುಷೋತ್ತಮ ರೈ ಸವಾಲ್
ಪುತ್ತೂರು,ನ.9: ತಾನು ಶಾಸಕಿ ಶಕುಂತಳಾ ಶೆಟ್ಟಿ ಅವರ ವಿರುದ್ದ ಮಾಡಿರುವ ಆರೋಪಗಳ ವಿಚಾರದಲ್ಲಿ ಸತ್ಯ ಪ್ರಮಾಣಕ್ಕೂ ಸಿದ್ಧ. ತಾಕತ್ತಿದ್ದರೆ ಶಾಸಕಿಯವರು ನಾನು ಮಾಡಿರುವ ಆರೋಪಗಳಿಗೆ ನೇರ ಮುಖಾಮುಖಿ ಉತ್ತರ ನೀಡಲಿ .ಅದನ್ನು ಬಿಟ್ಟು ತಮ್ಮ ಚೇಲಾಗಳ ಮೂಲಕ ಉತ್ತರ ಕೊಡಿಸುವುದು ಬೇಡ. ಪಕ್ಷದ ಕಾರ್ಯಕರ್ತರಲ್ಲದ ಕುಡುಕರ ಸಂಘದ ಸದಸ್ಯರ ಮಾತಿಗೆ ಘನತೆ ನೀಡಲು ತಾನು ಸಿದ್ಧನಿಲ್ಲ ಎಂದು ಬೂಡಿಯಾರ್ ಪುರುಷೋತ್ತಮ ರೈ ಅವರು ಸವಾಲಿನ ತಿರುಗೇಟು ನೀಡಿದರು.
ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಸುದ್ದಿಗೋಷ್ಠಿ ನಡೆಸಿ ಶಾಸಕರ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದೆ. ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಅದಕ್ಕೆ ಅವರು ನೇರ ಉತ್ತರ ನೀಡುವ ಬದಲು ಕೆಲವು ತಮ್ಮ ಚೇಲಾಗಳ ಮೂಲಕ ಸುದ್ದಿಗೋಷ್ಠಿ ಮಾಡಿಸಿ ಉತ್ತರ ಕೊಡಿಸಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಿದವರು ಮೂಲ ಕಾಂಗ್ರೆಸಿಗರೇ ಅಲ್ಲ. ಕುರಿಯ ಶಾಲೆಯ ವಠಾರದಲ್ಲಿ ಈ ಹಿಂದೆ ಆರೆಸ್ಸೆಸ್ ಶಿಬಿರ ನಡೆಸುತ್ತಿದ್ದ ,ಲೋಕಶಕ್ತಿ ಪಕ್ಷ, ಜನತಾದಳ ಪಕ್ಷ ಸುತ್ತಿ ಇದೀಗ ವೈಯಕ್ತಿಕ ಲಾಭಕ್ಕಾಗಿ ಶಕುಂತಳಾ ಶೆಟ್ಟಿ ಅವರ ಹಿಂದೆ ತಿರುಗುತ್ತಿರುವ ಜಯಪ್ರಕಾಶ್ ರೈ, ಬಿಜೆಪಿ ಜೊತೆ ನೈಟ್ ಪಾರ್ಟಿ ನಡೆಸುತ್ತಿರುವ ಸನತ್‍ಕುಮಾರ್ ರೈ, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗರಿಂದ ಹಣ ಪಡೆದು ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿರುವ ಯಾಕೂಬ್ ಇದೀಗ ನಾವೆಲ್ಲ ಕುರಿಯ ಗ್ರಾಮದ ಕಾಂಗ್ರೆಸ್ ಮುಖಂಡರೆಂದು ಹೇಳಿಕೊಂಡು ತನ್ನ ವಿರುದ್ದ ಆರೋಪ ಮಾಡಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಇರುವ ನನ್ನನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಹೇಳಲು ಇವರಿಗೆ ಏನು ನೈತಿಕತೆ ಇದೆ, ಇವರು ಯಾರು ಎಂದು ಅವರು ಪ್ರಶ್ನಿಸಿದರು.
ತನ್ನ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದ್ದು,ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡಿ ತಾನು ಬೆಳೆಸಿದ ಮಂದಿಯೇ ಇದೀಗ ತನ್ನ ಬೆನ್ನಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನನ್ನದೇ ಗ್ರಾಮದ ಕೆಲವು ಶ್ರೀಮಂತರು ಇದರ ಹಿಂದೆ ಇದ್ದು, ಎತ್ತಿಕಟ್ಟುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ತನ್ನ ವಿರುದ್ದ ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುರಿಯದ ಉಳ್ಳಾಲ ಮಹಾವಿಷ್ಣು ದೇವಾಲಯದ ಆವರಣಕ್ಕೆ ತಾನು ಜೀರ್ಣೋದ್ಧಾರದ ಸಂದರ್ಭದಲ್ಲಿ ಕಾಲಿಟ್ಟಿಲ್ಲ ಎಂಬ ಸುಳ್ಳು ಆರೋಪ ಮಾಡಲಾಗಿದೆ. ತಾನು ಮೂರು ದಶಕಗಳಿಂದ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದೇನೆ. ಹತ್ತು ವರ್ಷಗಳ ಕಾಲ ಮೊಕ್ತೇಸರನಾಗಿಯೂ ದೇವಾಲಯದಲ್ಲಿ ಸೇವೆ ಸಲ್ಲಿಸಿದ್ದೇನೆ . ನಾನು ಕಳುಹಿಸಿದ ಪಟ್ಟಿಯನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಉಸ್ತುವಾರಿ ಸಚಿವರು ಅಂತಿಮಗೊಳಿಸಿದ್ದು ನಿಜ. ಆದರೆ ಅದರಲ್ಲಿ ಯಾರೂ ಬಿಜೆಪಿಯವರಿಲ್ಲ. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿದ್ದರು ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಅಧ್ಯಕ್ಷರ ಹೆಸರನ್ನು ನಾನು ಮಾತ್ರ ಶಿಫಾರಸು ಮಾಡಿದ್ದಲ್ಲ. ಶಾಸಕರ ಪಟ್ಟಿಯಲ್ಲೂ ಅವರ ಹೆಸರಿತ್ತು ಎಂದ ಅವರು ಶಾಸಕರು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಕಳುಹಿಸಿದ ಪಟ್ಟಿಯನ್ನು ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದರು.
ಭೂನ್ಯಾಯ ಮಂಡಳಿಯ ಸದಸ್ಯತ್ವದಿಂದ ನನ್ನನ್ನು ವಜಾ ಮಾಡಿದ್ದರ ಹಿಂದೆ ಷಡ್ಯಂತ್ರವಿದೆ. ಅದಕ್ಕೆ ನಾನು ತಡೆಯಾಜ್ಞೆ ತಂದಿದ್ದರೂ ಅದನ್ನು ಅನುಷ್ಠಾನ ಮಾಡಲು ಬಿಡುತ್ತಿಲ್ಲ. ಶಾಸಕರ ಕುಮ್ಮಕ್ಕಿನಿಂದಾಗಿ ಈಗ ಮಂಡಳಿಯ ಸಭೆಯೇ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಮಾತಿನ ಏಟಿಗೆ ತಿರುಗೇಟು
ಪರಿಶಿಷ್ಟ ಜಾತಿಯವರ ಜಮೀನು ಕಬಳಿಸಿದ್ದೇನೆ ಎಂಬ ಆರೋಪದ ಮಾಡಿರುವ ಜಯಪ್ರಕಾಶ್ ರೈ ಅವರು ತನ್ನ ವಿರುದ್ದ ಮಾಡಿರುವ ಆರೋಪಗಳಿಗೆ ದಾಖಲೆ ಇದ್ದರೆ ತೋರಿಸಲಿ, ತನ್ನಿಂದಾಗಿ ಜಾಗ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಯಾರಿದ್ದಾರೆ ಎಂಬುವುದನ್ನು ಪುಣ್ಯ ಕ್ಷೇತ್ರದ ಮುಂದೆ ಪ್ರಾಮಾಣ ಮುಖೇನ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ ಪುರುಷೋತ್ತಮ ರೈ ಅವರು ಪರಿಶಿಷ್ಟ ಜಾತಿಯವರೊಬ್ಬರು ಸಂಪ್ಯದ ಮೂಲೆ ಎಂಬಲ್ಲಿನ 25ಸೆಂಟ್ಸ್ ಜಾಗಕ್ಕೆ ಅಕ್ರಮ ಸಕ್ರಮದಡಿ ಸಲ್ಲಿಸಿದ್ದ ಅರ್ಜಿಯನ್ನು ಬಾಕಿ ಉಳಿಸಿ ತನ್ನ ಹೆಸರಿಗೆ ಮಾಡಿಕೊಂಡವರು ಯಾರು ಎಂಬುವುದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರಾದ ಉದಯ ಕುಮಾರ್ ರೈ ಮಲಾರ್, ಸುನಿಲ್ ಡಿ.ಸೋಜಾ ಮಲಾರ್, ನೌಶದ್ ಕ್ಲಾಸಿಕ್, ಬಶೀರ್ ಬೂಡಿಯಾರ್, ಕುಕ್ಕ ಮುಗೇರ ಕುಕ್ಕುದಕಟ್ಟೆ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







