ರಾಮನನ್ನು ಅಯೋಧ್ಯೆಯಲ್ಲಿ ಕಟ್ಟಿ ಹಾಕಲಾಗಿದೆ: ಬೊಳುವಾರು ಮುಹಮ್ಮದ್ ಕುಂಞಿ
ಕನಕದಾಸರ ಸಚಿತ್ರ ಕಥಾ ಮಾಲಿಕೆ ಆರು ಪುಸ್ತಕಗಳ ಬಿಡುಗಡೆ ಸಮಾರಂಭ

ಬೆಂಗಳೂರು, ನ.9: ಜನಸಾಮಾನ್ಯರ ಮನಸ್ಸಿನಲ್ಲಿದ್ದ ರಾಮನನ್ನು ಅಯೋಧ್ಯೆ ಎಂಬ ಹೆರಿಗೆ ಕೋಣೆಯಲ್ಲಿ ಕಟ್ಟಿ ಹಾಕಲಾಗಿದೆ ಎಂದು ಹಿರಿಯ ಸಾಹಿತಿ ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ನಯನ ಸಭಾಂಗಣದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕನಕದಾಸರ ಸಚಿತ್ರ ಕಥಾ ಮಾಲಿಕೆ ಆರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಎಲ್ಲ ಕಡೆ ಇದ್ದ, ನನ್ನೂರು ಪುತ್ತೂರಿನ ಹತ್ತಿರವಿದ್ದ, ನನ್ನ ಮನೆ ಪಕ್ಕದಲ್ಲಿದ್ದ ರಾಮ ಎಲ್ಲಿದ್ದಾನೆ. ಅಯೋಧ್ಯೆಯಲ್ಲಿ ಕಟ್ಟಿ ಹಾಕಿದ್ದಾರೆ ಎಂದ ಅವರು, ರಾಮ ತನ್ನ ತಾಯಿ ಮನೆಯಲ್ಲಿ ಹುಟ್ಟಿದರೆ ತಂದೆ ಮನೆಗೆ ಹೇಗೆ ಹೋದ ಎಂಬ ಪ್ರಶ್ನೆಗಳನ್ನು ಇಂದಿನ ಮಕ್ಕಳು ಕೇಳುತ್ತಿದ್ದಾರೆ. ಆದರೆ, ಇದಕ್ಕೆ ಬುದ್ಧಿವಂತರು ಎನಿಸಿಕೊಂಡವರ ಬಳಿ ಉತ್ತರಗಳಿಲ್ಲ. ಮಕ್ಕಳನ್ನು ಇಂದು ಮೂರ್ಖರನ್ನಾಗಿ ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪೋಷಕರು ಒಂದು ಸಿದ್ಧಾಂತಕ್ಕೆ ಅಂಟಿಕೊಂಡಿದ್ದಾರೆ. ಅದರಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ, ಇಂದಿನ ಪೀಳಿಗೆಯ ಮಕ್ಕಳು ತಂದೆ-ತಾಯಿ ಹೇಳಿದ್ದು ಮಾತ್ರ ಸತ್ಯ ಎಂದು ನಂಬುವುದರ ಬದಲಿಗೆ, ಎಲ್ಲವನ್ನೂ ಓದಬೇಕು, ಅರ್ಥ ಮಾಡಿಕೊಳ್ಳಬೇಕು. ಅದನ್ನು ವಿಮರ್ಶೆ ಮಾಡಿ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆದರೆ, ಹಿರಿಯರಿಂದ ಉತ್ತರವನ್ನು ಮಾತ್ರ ನಿರೀಕ್ಷೆ ಮಾಡಬೇಡಿ ಎಂದು ಹೇಳಿದರು.
ದಲಿತರು ಮೀಸಲಾತಿಯನ್ನು ಬಳಸಿಕೊಂಡು ಮುಂದೆ ಹೋಗುತ್ತಿದ್ದಾರೆ ಎನ್ನುವ ಕಲ್ಪನೆಯಿದೆ. ಅದು ತಪ್ಪು. ಇಂದಿನ ದಲಿತರ ಸ್ಥಿತಿಯನ್ನು ಅವಲೋಕನ ಮಾಡಬೇಕು. ಒಬ್ಬ ದಲಿತ ಉನ್ನತ ಅಧಿಕಾರಿಯಾದರೆ ಸರಕಾರಿ ಮನೆ ಸಿಗುತ್ತದೆ. ಆದರೆ, ಸಾಮಾನ್ಯ ದಲಿತ ನಗರ ಪ್ರದೇಶದಲ್ಲಿ ವಾಸಿಸಲು ಸಾಧ್ಯವಾಗದಂತಹ ಸ್ಥಿತಿಯಿದೆ. ಆದರೂ ಅವರಿಗೆ ಯಾಕೆ ಮೀಸಲಾತಿ ಬೇಕು ಎಂದು ಪ್ರಶ್ನಿಸುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕನಕದಾಸ, ಪುರಂದರದಾಸ, ನಾರಾಯಣ ಗುರು, ಅಂಬೇಡ್ಕರ್‌ರ ಸಾಹಿತ್ಯವನ್ನು ಓದಬೇಕು ಹಾಗೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
600 ವರ್ಷಗಳ ಹಿಂದೆ ದಲಿತನಾಗಿದ್ದ ಕನಕ ರಚಿಸಿದ ಸಾಹಿತ್ಯವನ್ನು ದಾಸ ಸಾಹಿತ್ಯಕ್ಕೆ ಅಂಟಿಸಿದರು. ಅವನೊಬ್ಬ ದಂಡ ನಾಯಕನಾಗಿದ್ದ ಎಂಬುದನ್ನು ಎಲ್ಲಿಯೂ ತೋರಿಸದೆ, ವ್ಯವಸ್ಥಿತವಾಗಿ ಮುಚ್ಚಿಡಲಾಯಿತು. ಆದರೆ, ಅವನು ಕೃಷ್ಣನನ್ನು ಆರಾಧಿಸಿದ್ದಕ್ಕೆ ಕನಕನ ಕಿಂಡಿ ಹೆಸರಿನಲ್ಲಿ ಜನರಿಗೆ ತೋರಿಸಿದರು. ಅದರ ಹೊರತು ಅವನು ತಳಮಟ್ಟದ ದೇವರನ್ನು ಆರಾಧಿಸಿದ್ದರೆ, ಕನಕನ ಸಾಹಿತ್ಯ, ವಚನಗಳು ಯಾರಿಗೂ ತಲುಪುತ್ತಿರಲಿಲ್ಲ ಎಂದ ಅವರು, ಇಂದಿನ ಸಮಾಜದಲ್ಲಿ ಒಬ್ಬ ದಲಿತ ಮಾಡಿದ ಹಪ್ಪಳ ತಿಂತಾರೆ. ಆದರೆ, ಒಂದು ಹೊಟೇಲ್ ತೆರೆದರೆ ವ್ಯಾಪಾರವಾಗುವುದಿಲ್ಲ. ಹೀಗಿರುವಾಗ, ಅವರು ಮೀಸಲಾತಿ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಲಿಂಗಾಯತ-ವೀರಶೈವರು ಪ್ರತ್ಯೇಕ ಧರ್ಮಕ್ಕಾಗಿ ಚಳವಳಿ ಆರಂಭಿಸಿರುವುದು ದಿನನಿತ್ಯ ವರದಿಯಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ಬಸವಣ್ಣ ಬದುಕಿದ್ದರೆ ಕುಲ ಕುಲವೆಂದು ಯಾಕೆ ಹೊಡೆದಾಡುವಿರಿ ಎಂಬ ಕನಕನ ಕೀರ್ತನೆಯನ್ನು ಹಾಡುತ್ತಿದ್ದರು. ಇಂದು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವವರು ತೀರ ಕೆಳಸ್ಥಾನದಲ್ಲಿ ಇಲ್ಲ. ಆಸೆ ಅತಿಯಾಗಿದೆ ಎಂದು ತಿಳಿಸಿದರು.
ಈ ವೇಳೆ ಕನಕದಾಸರ ಜೀವನ ಚರಿತ್ರೆ, ಮೋಹನ ತರಂಗಿಣಿ, ನಳಚರಿತೆ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ ಹಾಗೂ ಕನಕದಾಸರ ಕೀರ್ತನೆಗಳು ಕೃತಿಗಳನ್ನು ವಿದ್ಯಾರ್ಥಿಗಳಾದ ರಿಝ್ವಾನ್, ಚೈತ್ರ, ಆರ್.ಎಸ್.ಸಂಜಯ್, ಅಂಜು, ಬಿ.ಎಂ.ಕಲ್ಯಾಣಿ, ಚಂದನ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಲೇಖಕ ಹುಲಿಕುಂಟೆ ಮೂರ್ತಿ, ವಿದ್ವಾಂಸ ರಾಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾತ ರೈಲಿನಲ್ಲಿ ಪ್ರಯಾಣಿಸುವಾಗ ನೋಡಿದ ದೃಶ್ಯವನ್ನು ಮೊಮ್ಮಗ ಸಂದರ್ಭ ಸಹಿತ ವಿವರಿಸಿ ಬರೆದಂತೆ ನಮ್ಮ ಚರಿತ್ರೆ, ಪುರಾಣಗಳು. ಅದು ಎಷ್ಟು ಸತ್ಯವಾಗಿರುತ್ತದೆ. ಬುದ್ಧಿವಂತರು ಪುರಾಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳು ನೀಡಲು ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ನಾನು ಎಂಬ ಅಹಂ ಇರಬಾರದು. ಪರಿಪೂರ್ಣ ಮನುಷ್ಯರಾಗಲು ಅಹಂ ಮೀರಿರಬೇಕು.
-ಬೊಳುವಾರು ಮೊಹಮ್ಮದ್ ಕುಂಞಿ, ಹಿರಿಯ ಸಾಹಿತಿ







