ಕುಂದಾಪುರ: ಕಾಂಗ್ರೆಸ್‌ನಿಂದ ಕರಾಳ ದಿನಾಚರಣೆ

ಕುಂದಾಪುರ, ನ.9: ಒಂದು ವರ್ಷದ ಹಿಂದೆ ಪ್ರಧಾನಿ ಮೋದಿ ಮಾಡಿದ ನೋಟು ನಿಷೇಧದಿಂದ ಬಡಮಧ್ಯಮ ವರ್ಗದ ಜನರ ಬದುಕೇ ಅಯೋಮಯವಾಗಿದೆ. ಅಸಂಘಟಿತ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸವಿಲ್ಲದೆ ಆದಾಯವಿಲ್ಲದೆ ಜನ ಖರ್ಚಿಗೆ ಕಾಸಿಲ್ಲದೆ ಪರದಾಡುತ್ತಿದ್ದಾರೆ. ಇದು ಖಂಡಿತವಾಗಿಯೂ ಮೋದಿ ಸರಕಾರಕ್ಕೆ ಶಾಪವಾಗಲಿದೆ ಎಂದು ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಕುಂದಾಪುರ ಕಾಂಗ್ರೆಸ್ ಕಛೇರಿ ಸಮೀಪ ನೋಟು ನಿಷೇಧದ ವಿರುದ್ಧ ಬುಧವಾರ ರಾತ್ರಿ 8 ಗಂಟೆಗೆ ನಡೆದ ಕರಾಳ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನೋಟು ನಿಷೇಧ ಎಂಬುದು ಮೋದಿ ಸರಕಾರದ ಕೆಲವೇ ಕೆಲವು ಬೆಂಬಲಿತ ಉದ್ಯಮಿಗಳ ಕಪ್ಪುಹಣ ಬಿಳಿಯಾಗಿಸುವ ಒಂದು ಯೋಜನೆಯಾಗಿತ್ತೆ ಹೊರತು, ಈ ದೇಶದ ಆರ್ಥಿಕತೆಗೆ ಅದು ಪ್ರಯೋಜನಕಾರಿಯಾಗಲೇ ಇಲ್ಲ. ಬದಲಿಗೆ ದೇಶದ ಜಿಡಿಪಿ ಕುಸಿಯಲು ಕಾರಣವಾಯಿತು. ಇದರ ಪರಿಣಾಮವಾಗಿ ಇಡೀ ದೇಶದ ಬಡ ಅಮಾಯಕ ಜನತೆ ಹಸಿವಿನಿಂದ ಕಂಗೆಟ್ಟಿದ್ದಾರೆ ಎಂದರು.
ಕುಂದಾಪುರ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಮಾತನಾಡಿ, ಕರ್ನಾಟಕ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅನ್ನಬಾಗ್ಯ ಯೋಜನೆಯಿಂದಾಗಿ ಈ ರಾಜ್ಯದ ಬಡಜನತೆ ಹಸಿವೆಯಿಂದ ನರಳುವುದು ತಪ್ಪಿತು. ಆದರೆ ಬಿಜೆಪಿ ಇದನ್ನು ಕಪ್ಪು ಹಣ ವಿರೋಧಿ ದಿನವಾಗಿ ಆಚರಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಶೇರಿಗಾರ್, ಕಾಂಗ್ರೆಸ್ ಐಟಿ ಸೆಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಿವಾನಂದ ಕೆ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ಪುರಸಬಾ ಸದಸ್ಯ ಶ್ರೀಧರ್ ಶೇರಿಗಾರ್,ಮಾಜಿ ಪುರಸಬಾ ಅಧ್ಯಕ್ಷ ಹಾರೂನ್ ಸಾಹೇಬ್, ಮಹಿಳಾ ಕಾಂಗ್ರೆಸ್‌ನ ಶೋಭ ಸಚ್ಚಿದಾನಂದ, ಜಿಪಂ ಮಾಜಿ ಸದಸ್ಯೆ ರೇವತಿ ಶೆಡ್ತಿ, ತಾಪಂ ಸದಸ್ಯೆ ಜ್ಯೋತಿ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು.







