ಕೆಪಿಎಸ್ಸಿ ನೇಮಕಾತಿಯಲ್ಲಿ ಸರಕಾರ ಯೂ ಟರ್ನ್ ತೆಗೆದುಕೊಂಡಿಲ್ಲ: ಹೈಕೋರ್ಟ್‌ಗೆ ಹಿರಿಯ ವಕೀಲ ಆದಿತ್ಯ ಸೋಂಧಿ ಹೇಳಿಕೆ
2011ರ ಸಾಲಿನ ಕೆಪಿಎಸ್ಸಿ ಹಗರಣ
ಬೆಂಗಳೂರು, ನ.9: ಕೆಪಿಎಸ್ಸಿ ನೇಮಕಾತಿ ವಿಚಾರದಲ್ಲಿ ಸರಕಾರ ಯಾವುದೇ ಯೂ ಟರ್ನ್ ತೆಗೆದುಕೊಂಡಿಲ್ಲ. ಬದಲಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪಾಲಿಸಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೋಂಧಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕೆಪಿಎಸ್ಸಿ ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಮುಂದುವರಿಸಿತು.
ವಿಚಾರಣೆ ವೇಳೆ ಸರಕಾರದ ಪರ ವಾದ ಮಂಡಿಸಿದ ಆದಿತ್ಯ ಸೋಂಧಿ, ಕೆಎಟಿ ಆದೇಶದಂತೆ ಸರಕಾರ ಕೈಗೊಂಡಿರುವ ತೀರ್ಮಾನ ಸರಿಯಾಗಿಯೇ ಇದೆ. ಆಯ್ಕೆ ಪ್ರಕ್ರಿಯೆಗೆ ವ್ಯಯ ಮಾಡಿದ ಹಣ, ಸಮಯ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೆಎಟಿ ಆದೇಶ ಪಾಲನೆ ಮಾಡಲಾಗಿದೆ ಎಂದರು.
ಸಿಐಡಿ ವರದಿಯಲ್ಲಿ 46 ಜನ ಕಳಂಕಿತರು ಇದ್ದಾರೆ. ಇವರಲ್ಲಿ ಅರ್ಜಿದಾರರಾದ ಡಾ.ಮೈತ್ರಿ ಕೂಡಾ ಒಬ್ಬರು. ಆರೋಪಿಗಳಾಗಿರುವ ಕೆಪಿಎಸ್‌ಸಿ ಸದಸ್ಯರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ರಾಷ್ಟ್ರಪತಿ ಅವರನ್ನು ಕೋರಲಾಗಿದೆ. ಹಲವು ದಾಖಲೆಗಳ ಭಾಷಾಂತರವೂ ನಡೆಯುತ್ತಿದೆ ಎಂದು ವಿವರಿಸಿದರು.
ಆಯ್ಕೆಯಾಗಿರುವ ಒಬ್ಬ ಅಭ್ಯರ್ಥಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಜಿ.ರಾಘವನ್ ಅವರು, ಪಿಐಎಲ್ ಸಲ್ಲಿಸಿರುವ ಡಾ.ಮೈತ್ರಿ ಅವರು ಸ್ವಚ್ಛ ಕೈಗಳಿಂದ ಈ ಅರ್ಜಿ ಸಲ್ಲಿಸಿಲ್ಲ. ಕೆಎಟಿ ಆದೇಶ ಎಂದರೆ ಅದು ಕೋರ್ಟ್ ಆದೇಶ. ಅದನ್ನು ಪಿಐಎಲ್ ಮುಖಾಂತರ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ರಮೇಶ್, ಹೌದು. ಪಿಐಎಲ್ ಅನ್ನು ಸ್ವಚ್ಛ ಹೃದಯದೊಂದಿಗೆ ಹಾಕುವುದು ಕೂಡಾ ಮುಖ್ಯ ಎಂದರು. ವಿಚಾರಣೆಯನ್ನು ನ.10ಕ್ಕೆ ಮುಂದೂಡಲಾಗಿದೆ.







