ಅಧಿವೇಶನದ ಬಳಿಕ ಮತ್ತೊಮ್ಮೆ ಸಭೆ ಸೇರಿ ನಿರ್ಧಾರ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ನ. 9: ಪ್ರತ್ಯೇಕ ನಾಡಧ್ವಜ ರಚನೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ್ದು, ನ.13ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ‘ಕನ್ನಡ ಪ್ರತ್ಯೇಕ ನಾಡಧ್ವಜ’ ರಚನೆ ಸಂಬಂಧದ ತಜ್ಞರ ಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ನಡೆದ ಸಭೆ ಅಪೂರ್ಣವಾಗಿದ್ದು, ಈ ಬಗ್ಗೆ ಅಧಿವೇಶನದ ಬಳಿಕ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಜ್ಞರ ಸಮಿತಿ ರಚನೆಯಾಗಿ ಐದು ತಿಂಗಳ ಬಳಿಕ ನಡೆಯುತ್ತಿರುವ ಸಮಿತಿಯ ಮೊದಲನೆ ಸಭೆ ನಡೆಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.





