ಆಭರಣ ಕಳವು ಪ್ರಕರಣ: 5 ಆರೋಪಿಗಳ ಬಂಧನ
ಬೆಂಗಳೂರು, ನ.9: ಹೊರ ರಾಜ್ಯದಿಂದ ನಗರಕ್ಕೆ ಬಂದು ಒಂಟಿ ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಆಭರಣ ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಮೈಕೋ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಜಯಪ್ರಕಾಶ್, ನಿತಿನ್ ಕುಮಾರ್, ಜಿತೇಂದ್ರ, ಕಪಿಲ್ ಕುಮಾರ್ ಮತ್ತು ನಂದ ಕಿಶೋರ್ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ ಆರೋಪಿಗಳು ನಗರದ ಸುತ್ತಮುತ್ತ ಓಡಾಡುತ್ತ ಸರ ಕಸಿದು ಪರಾರಿಯಾಗುವ ಕೃತ್ಯದಲ್ಲಿ ನಿಪುಣರಾಗಿದ್ದರು. ಉತ್ತರಪ್ರದೇಶ ರಾಜ್ಯದ ಶಾಮಲಿ ಜಿಲ್ಲೆಯ ಕುಖ್ಯಾತ ಬವರಿಯಾ ಗ್ಯಾಂಗ್‌ನ ಸದಸ್ಯರು ಎಂದು ತಿಳಿದು ಬಂದಿದೆ.
ನಗರದಲ್ಲಿ ನಡೆದಿದ್ದ 30ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಮಹಿಳೆಯರ ಸರಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ನಗರದ ಮೈಕೋ ಲೇಔಟ್, ತಿಲಕನಗರ, ಜೆ.ಪಿ ನಗರ, ಕೆಂಗೇರಿ, ಆರ್.ಎಂ.ಸಿ ಯಾರ್ಡ್, ಜಯನಗರ, ಕುಮಾರಸ್ವಾಮಿ ಲೇಔಟ್ ಸುಬ್ರಹ್ಮಣ್ಯಪುರ ಮತ್ತು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ಬಂಧಿತ ಆರೋಪಿಗಳಿಂದ 20 ಲಕ್ಷ ರೂ. ವೌಲ್ಯದ 678 ಗ್ರಾಂ ತೂಕದ 15 ಚಿನ್ನದ ಸರ, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿ ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮಾಹಿತಿ ನೀಡಿದರು.
ಬಹುಮಾನ: ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸಿಬ್ಬಂದಿಗಳಿಗೆ 2 ಲಕ್ಷ ನಗದು ಬಹುಮಾನವನ್ನು ಪೊಲೀಸ್ ಆಯುಕ್ತರು ಘೋಷಿಸಿದರು.







