ಟಿಪ್ಪು ಜಯಂತಿ: ಎಲ್ಲೆಡೆ ಕಟ್ಟೆಚ್ಚರ
ಬೆಂಗಳೂರು, ನ.9: ನ.10ರಂದು ಮೈಸೂರು ಹುಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೋಮುಗಲಭೆ-ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವ ಕಾರಣ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಗುರುವಾರ ಸಂಜೆ ಬಿಗಿ ಬಂದೋಬಸ್ತ್ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯಾವುದೇ ರೀತಿಯಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಹಾಗೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.
ಅದರಂತೆ, ಇಂದು(ಶುಕ್ರವಾರ) ಪ್ರತಿ ಜಿಲ್ಲೆಯಲ್ಲೂ ಕೆಎಸ್ಸಾರ್ಪಿ ತುಕಡಿ, ಜಿಲ್ಲಾ ಪೊಲೀಸ್ ಸಶಸ ಪೊಲೀಸ್ ಪಡೆ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೈಸೂರು ಹುಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಬಂದ ಹಿನ್ನಲೆಯಲ್ಲಿ ಕೆಲಕಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೋಮುಗಲಭೆಗೆ ಆಸ್ಪದ ನೀಡದಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಡಿಜಿಪಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಉದ್ವಿಗ್ನ ಸ್ಥಿತಿ: ಟಿಪ್ಪು ಜಯಂತಿ ಆಚರಣೆ ವಿರೋಧಿ ಹೋರಾಟ ಸಮಿತಿಯೂ ಮಡಿಕೇರಿಯಲ್ಲಿ ನ.10ರಂದು ‘ಕಪ್ಪು ದಿನ’ ಆಚರಣೆಗೆ ಕರೆ ನೀಡಿದೆ. ಜತೆಗೆ ಬಿಜೆವೈಎಂ ಸಂಘಟನೆಯ ಕುಟ್ಟಪ್ಪ ಜಯಂತಿ ಆಚರಣೆಗೆ ಕರೆ ನೀಡಿದೆ. ಹೀಗಾಗಿ, ಮಡಿಕೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಬಂದೋಬಸ್ತ್‌ಗೆ ಪೊಲೀರು ಸಜ್ಜಾಗಿದ್ದಾರೆ.
ಪೊಲೀಸರಿಗೆ ಸವಾಲು: ಟಿಪ್ಪು ಜಯಂತಿ ಆಚರಣೆಯನ್ನು ಸಮರ್ಪಕವಾಗಿ ನಿಭಾಯಿಸುವ ಸವಾಲು ಪೊಲೀಸರ ಹೆಗಲಿಗೇರಿದೆ. ಈ ಹಿಂದೆ ನಡೆದ ಘಟನೆಗಳನ್ನು ಪರಿಶೀಲನೆ ನಡೆಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾಯಿಟ್ಟಿದ್ದಾರೆ. ಟಿಪ್ಪು ಜಯಂತಿ ಆಚರಣೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವ ಸವಾಲು ಎುರಿಸಲು ಖಾಕಿ ಪಡೆ ಸನ್ನದ್ಧವಾಗಿದೆ.
'ಶಕ್ತಿ ಸೌಧದ ಬಳಿ ಸರ್ಪಗಾವಲು'
ವಿಧಾನಸೌಧದಲ್ಲಿ ಸರಕಾರದ ವತಿಯಿಂದ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ವಿಧಾನಸೌಧದ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.
ನಗರದಲ್ಲಿ ಪರ-ವಿರೋಧ ಸಾರ್ವಜನಿಕ ಮೆರವಣಿಗೆ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಜಯಂತಿ ವೇಳೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ತಡೆಯಲು 13 ಸಾವಿರ ಪೊಲೀಸ್ ಸಿಬ್ಬಂದಿ, 30 ರಾಜ್ಯ ಸಶಸ ಮೀಸಲು ಪಡೆ, 20 ಗರುಡಾ ಪಡೆಗಳನ್ನು ನಿಯೋಜಿಸಲಾಗಿದೆ.
-ಟಿ.ಸುನೀಲ್‌ಕುಮಾರ್, ನಗರ ಪೊಲೀಸ್ ಆಯುಕ್ತ







