ನಾಪತ್ತೆಯಾದ ಯುವತಿ 2 ವರ್ಷಗಳ ಬಳಿಕ ಪತ್ತೆ!
ಮಣಿಪಾಲ, ನ.9: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಯನ್ನು ಉಡುಪಿಯ ಸೆನ್ ಪೊಲೀಸರು ತಮಿಳುನಾಡು ಕೊಯಮುತ್ತೂರು ಜಿಲ್ಲೆಯ ಶಿವಾನಂದ ಕಾಲೋನಿ ಎಂಬಲ್ಲಿ ಪತ್ತೆ ಹಚ್ಚಿದ್ದಾರೆ.
ಪತ್ತೆಯಾದವಳನ್ನು ಬಾಗಲಕೋಟೆ ಮೂಲದ ಬಾಲಪ್ಪ ಎಂಬವರ ಮಗಳು ಮಂಜುಳಾ(19) ಎಂದು ಗುರುತಿಸಲಾಗಿದೆ. ಈಕೆ 17ವರ್ಷ ಪ್ರಾಯ ಇರುವಾಗ ಅಂದರೆ 2015ರ ಆ.25ರಂದು ಅಪಹರಣಕ್ಕೊಳಗಾಗಿರುವುದಾಗಿ ಹೇಳಿ ಆಕೆಯ ಮನೆಯವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ನಿರ್ದೇಶನ ದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಉಡುಪಿ ಸೆನ್ ಅಪರಾಧ(ಡಿಸಿಬಿ) ಪೊಲೀಸ್ ಠಾಣಾ ನಿರೀಕ್ಷಕ ರತ್ನ ಕುಮಾರ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆಕೆಯನ್ನು ನ.8ರಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಕೆ ತನ್ನ ಸ್ವಇಚ್ಛೆಯಿಂದ ಮನೆಯಿಂದ ಹೋಗಿ ತಮಿಳುನಾಡಿನಲ್ಲಿ ಮಂಗಳೂರು ಮೂಲದ ಪವಿತ್ರ ಕುಮಾರ್ ಎಂಬಾತನನ್ನು ವಿವಾಹವಾಗಿದ್ದು, ಈಗ ಆಕೆಗೆ ಒಂದು ಮಗುವಿದೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಈ ಕಾರ್ಯಾಚರಣೆಯಲ್ಲಿ ಸೆನ್ ಠಾಣೆಯ ಸಿಬ್ಬಂದಿಳಾದ ಶ್ರೀಧರ್ ಶೆಟ್ಟಿಗಾರ್, ಸತೀಶ್, ಕೃಷ್ಣಪ್ರಸಾದ್, ಮಂಜುಳಾ, ಶಿವಾನಂದ ಮತ್ತು ದಿನೇಶ್ ಸಹಕರಿಸಿದ್ದಾರೆ.





