ವಂದೇ ಮಾತರಂ ಕಡ್ಡಾಯ ಕುರಿತ ಆದೇಶ ಮಾರ್ಪಾಡು ಮಾಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ, ನ.9: ರಾಜ್ಯದ ಶಿಕ್ಷಣ ಸಂಸ್ಥೆ, ಸರಕಾರಿ ಕಚೇರಿ, ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ಆದೇಶ ಜಾರಿಗೊಳಿಸಿದ ಮೂರು ತಿಂಗಳ ಬಳಿಕ ನ್ಯಾಯಾಲಯದ ವಿಭಾಗೀಯ ಪೀಠವೊಂದು ಆದೇಶವನ್ನು ಮಾರ್ಪಡಿಸಿದ್ದು , ಈ ವಿಷಯದಲ್ಲಿ ರಾಜ್ಯ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದೆ.
ರಾಜ್ಯಸರಕಾರ ಕೈಗೊಳ್ಳಬೇಕಾದ ಕಾರ್ಯನೀತಿ ನಿರ್ಣಯ ಇದಾಗಿರುವ ಕಾರಣ ನಾವು ಆದೇಶವನ್ನು ಮಾರ್ಪಡಿಸುತ್ತಿದ್ದೇವೆ. ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ರಾಜ್ಯಸರಕಾರದ ವಿವೇಚನೆಗೆ ಬಿಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಜಿ.ರಮೇಶ್ ಮತ್ತು ಆರ್‌ಎಂಟಿ ಟೀಕಾ ರಾಮನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ವೀರಮಣಿ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆ ಸಂದರ್ಭ ಅಭ್ಯರ್ಥಿ ಕೆ.ವೀರಮಣಿ , ವಂದೇಮಾತರಂ ಗೀತೆಯನ್ನು ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ ಎಂದು ಬರೆದಿದ್ದರು. ಈ ಉತ್ತರ ತಪ್ಪೆಂದು ತಿಳಿಸಿದ್ದ ಶಿಕ್ಷಕರ ನೇಮಕಾತಿ ಮಂಡಳಿ ಅವರಿಗೆ ಒಂದು ಅಂಕ ಕಡಿತಗೊಳಿಸಿದ ಕಾರಣ ಅವರು ಪರೀಕ್ಷೆಯಲ್ಲಿ ಫೇಲಾಗಿದ್ದರು.
ಇದನ್ನು ಪ್ರಶ್ನಿಸಿ ವೀರಮಣಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಸಂದರ್ಭ , ವಂದೇಮಾತರಂ ಗೀತೆಯ ಮೂಲ ಬಂಗಾಳಿ ಭಾಷೆ. ಬಳಿಕ ಇದನ್ನು ಸಂಸ್ಕೃತಕ್ಕೆ ಅನುವಾದ ಮಾಡಲಾಗಿದೆ ಎಂದು ತಿಳಿಸಿದ್ದ ನ್ಯಾಯಾಧೀಶರು, ವೀರಮಣಿಗೆ ಒಂದು ಅಂಕ ನೀಡಬೇಕು ಹಾಗೂ ಅವರನ್ನು ತೇರ್ಗಡೆಗೊಳಿಸಿ ಸೂಕ್ತ ಉದ್ಯೋಗ ನೀಡಬೇಕೆಂದು ಸೂಚಿಸಿದ್ದರು.
ಈ ಆದೇಶದ ಬಗ್ಗೆ ನೇಮಕಾತಿ ಮಂಡಳಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಅಭ್ಯರ್ಥಿಗಳಿಗೆ ಅಂಕ ನೀಡುವುದು, ಅವರನ್ನು ಉದ್ಯೋಗಕ್ಕೆ ನೇಮಕಾತಿ ನಡೆಸುವುದು ಇವೆಲ್ಲಾ ಸರಕಾರದ ಆಡಳಿತ ಕಾರ್ಯನೀತಿಗೆ ಹೊಂದಿಕೊಂಡಿರುತ್ತದೆ. ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗದ ಹೊರತು, ಸಾಮಾನ್ಯವಾಗಿ ಸರಕಾರದ ಕಾರ್ಯನೀತಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ನಡೆಸುವುದಿಲ್ಲ. ಈ ಪ್ರಕರಣದಲ್ಲಿ ಸಂವಿಧಾನದ ಆಶಯದ ಉಲ್ಲಂಘನೆಯಾಗಿರುವುದು ಕಂಡುಬರುವುದಿಲ್ಲ. ಆದ್ದರಿಂದ ಅಭ್ಯರ್ಥಿಗೆ ಒಂದು ಅಂಕ ನೀಡಿದ ಬಳಿಕ ಅವರನ್ನು ಸೂಕ್ತ ಉದ್ಯೋಗಕ್ಕೆ ನೇಮಿಸುವುದು ಸರಕಾರದ ಕಾರ್ಯನೀತಿಗೆ ಬಿಟ್ಟಿರುವ ವಿಚಾರವಾಗಿದೆ. ಈ ಬಗ್ಗೆ ಸರಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯ ಸೂಚಿಸಿತು.
ಅಲ್ಲದೆ ವಂದೇಮಾತರಂ ಗಾಯನ ಕಡ್ಡಾಯಕ್ಕೆ ಸಂಬಂಧಿಸಿಯೂ ರಾಜ್ಯ ಸರಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇದು ಸರಕಾರದ ಕಾರ್ಯನೀತಿಗೆ ಸಂಬಂಧಿಸಿದ ವಿಷಯ. ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ಸರಕಾರದ ವಿವೇಚನೆಗೆ ಬಿಟ್ಟಿರುವ ವಿಷಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.







