ಟಿಪ್ಪು ಜಯಂತಿ: ಚಾಮರಾಜನಗರದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್

ಚಾಮರಾಜನಗರ, ನ.9: ಚಾಮರಾಜನಗರ ಜಿಲ್ಲೆಯಲ್ಲಿ ನ.10ರಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ಆಚರಿಸುವ ಸಲುವಾಗಿ ಪೊಲೀಸ್ ಇಲಾಖೆ ಭಾರೀ ಬಂದೂ ಬಸ್ತ್ ಕೈಗೊಂಡಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 779 ಮಂದಿಯನ್ನು ನಿಯೋಜಿಸಲಾಗಿದೆ.
10 ಡಿ ಎ ಆರ್ ಹಾಗೂ 03 ಕೆ.ಎಸ್.ಆರ್.ಪಿ ತುಕಡಿಯನ್ನು ಬಳಸಿಕೊಳ್ಳಲಾಗಿದೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್ ಮೀನಾರವರ ಮಾರ್ಗದರ್ಶನದಲ್ಲಿ ಜಿಲ್ಲೆಯ ನಾಲ್ಕು ತಾಲೂಕಿನಲ್ಲೂ ಪೊಲೀಸ್ ಪಥ ಸಂಚಲನ ನಡೆಲಾಗಿದೆ. ಬಿಗಿ ಬಂದೂ ಬಸ್ತ್‍ಗಾಗಿ 3 ಡಿ ಎಸ್.ಪಿ 07 ಪೊಲೀಸ್ ಇನ್ಸ್‍ಪೆಕ್ಟರ್, 13 ಸಬ್ ಇನ್ಸ್ ಪೆಕ್ಟರ್, 62 ಎಎಸ್ಸೈ, 283 ಮುಖ್ಯಪೇದೆಗಳು, 34 ಮಹಿಳಾ ಪೊಲೀಸ್ ಸಿಬ್ಬಂದಿಗಳು ಮತ್ತು 320 ಹೋಂ ಗಾರ್ಡ್‍ಗಳನ್ನು ನಿಯೋಜನೆ ಮಾಡಲಾಗಿದೆ.
ಜಿಲ್ಲಾ ಕೇಂದ್ರದ ನಾಲ್ಕೂ ದಿಕ್ಕುಗಳಲ್ಲಿ ಪೊಲೀಸ್ ಬ್ಯಾರಿಕ್ಯಾಡ್ ಹಾಕಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ಕಾರ್ಯವನ್ನು ಪೊಲೀಸ್ ಮಾಡಲಾಗುತ್ತಿದ್ದು, ಹೊರಗಿನ ವ್ಯಕ್ತಿಗಳ ಆಗಮನದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಭವನದಲ್ಲಿ ನ.10ರಂದು 10 ಗಂಟೆಗೆ ನಡೆಯುವ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಯಾವುದೇ ಕಾರಣಕ್ಕೆ ಅಡ್ಡಿಯಾಗದಂತೆ ಪೊಲೀಸ್ ಕಟ್ಟೆಚ್ಚರ ವಹಿಸಿದ್ದಾರೆ.





