ಸಾಮಾಜಿಕ ನ್ಯಾಯಕ್ಕೆ ಹೋರಾಟ: ಪೂವಯ್ಯ
ಪಾಲೇಮಾಡು ಹೋರಾಟಕ್ಕೆ ಕೊಡಗು ಜೆಡಿಎಸ್ ಬೆಂಬಲ
ಸಿದ್ದಾಪುರ (ಕೊಡಗು), ನ.9: ಜಿಲ್ಲೆಯ ಮೂರ್ನಾಡು ಸಮೀಪದ ಹೊದ್ದೂರು ಗ್ರಾಪಂ ವ್ಯಾಪ್ತಿಯ ಪಾಲೇಮಾಡಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ಮಶಾನ ಭೂಮಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕಳೆದ 12 ದಿನಗಳಿಂದ ಬಹುಜನ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೊಣ್ಣಪ್ಪನೇತೃತ್ವದಲ್ಲಿ ನಡೆಯುತ್ತಿ ರುವ ಆಹೋರಾತ್ರಿ ಹೋರಾಟಕ್ಕೆ ಕೊಡಗು ಜೆಡಿಎಸ್ ಬೆಂಬಲ ಸೂಚಿಸಿದೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಜನರ ಭಾವನಾತ್ಮಕ ನೆಲೆಗಟ್ಟಿನ ಮೇಲೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಮೂಲಕ ಮನರಂಜನೆಗೆ ಮುಂದಾಗಿರುವುದು ಅತ್ಯಂತ ನೋವಿನ ವಿಚಾರ. ಸ್ಥಳೀಯ ಜನಪ್ರತಿನಿಧಿಗಳು ರಾಜಕೀಯ ಬೆರೆಸುವುದನ್ನು ಬಿಟ್ಟು ಬಡಜನರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವುದರಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿದರು.
ಪಾಲೇಮಾಡು ನಿವಾಸಿಗಳ ಹೋರಾಟಕ್ಕೆ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಮುಂದೆಯೂ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು. ಈ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಮನ್ಸೂರ್‌ಅಲಿ, ಮತೀನ್ ಸೇರಿದಂತೆ ಇತರರು ಇದ್ದರು.





