ಗುಜರಾತ್ ವಿರುದ್ಧ ಗರ್ಜಿಸಿದ ಪೂಜಾರ

ರಾಜ್‌ಕೋಟ್, ನ.9: ಗುಜರಾತ್ ವಿರುದ್ಧ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಶತಕ ಸಿಡಿಸಿದ ಚೇತೇಶ್ವರ ಪೂಜಾರ ಸೌರಾಷ್ಟ್ರ ತಂಡಕ್ಕೆ ಆಸರೆಯಾದರು.
ಟಾಸ್ ಜಯಿಸಿದ ಸೌರಾಷ್ಟ್ರ ನಾಯಕ ಪೂಜಾರ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (30)ಔಟಾದ ಬಳಿಕ ಕ್ರೀಸಿಗಿಳಿದ ಪೂಜಾರ ಶತಕ (ಅಜೇಯ 115,188 ಎಸೆತ, 15 ಬೌಂಡರಿ) ಸಿಡಿಸಿದ್ದಲ್ಲದೆ ಸ್ನೆಲ್ ಪಟೇಲ್‌ರೊಂದಿಗೆ(ಅಜೇಯ 156, 277 ಎಸೆತ, 21 ಬೌಂಡರಿ) 2ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 250 ರನ್ ಜೊತೆಯಾಟ ನಡೆಸಿ ಸೌರಾಷ್ಟ್ರ ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಲು ನೆರವಾದರು.
ಪೂಜಾರ ಕಳೆದ ವಾರ ಜಾರ್ಖಂಡ್‌ನ ವಿರುದ್ಧ 12ನೆ ಪ್ರಥಮ ದರ್ಜೆ ದ್ವಿಶತಕ ದಾಖಲಿಸುವ ಮೂಲಕ 70 ವರ್ಷ ಹಳೆಯ ವಿಜಯ್ ಮರ್ಚೆಂಟ್‌ರ ದಾಖಲೆಯನ್ನು ಮುರಿದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ದ್ವಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಪೂಜಾರ ಅವರ 204 ರನ್ ನೆರವಿನಿಂದ ಸೌರಾಷ್ಟ್ರ 6 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.





