ಬಿಎಐ ಚುನಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಲೇವಾರಿ

ಹೊಸದಿಲ್ಲಿ, ನ.9: ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್‌ಗೆ(ಬಿಎಐ)2014ರಲ್ಲಿ ನಡೆದ ಚುನಾವಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಿಲೇವಾರಿ ಮಾಡಿದೆ. ಅರ್ಜಿ ಬಾಕಿ ಇರಿಸಿದರೆ ಕಳೆದ ಕೆಲವು ವರ್ಷಗಳಿಂದ ಬಿಎಐ ಮಾಡಿರುವ ಉತ್ತಮ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಬಿಎಐ ಕ್ರೀಡಾ ಬೆಳವಣಿಗೆಗೆ ಶ್ರಮಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆಟಗಾರರು ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಜಸ್ಟಿಸ್ ಸಿ ಹರಿ ಶಂಕರ್ ಅವರಿದ್ದ ನ್ಯಾಯಪೀಠ ಹೇಳಿದೆ.
2014ರ ಜನವರಿ 25 ರಂದು ನಡೆದಿದ್ದ ಬಿಎಐ ಚುನಾವಣೆಯನ್ನು ಅಸಿಂಧುಗೊಳಿಸುವಂತೆ ಆಗ್ರಹಿಸಿ ಮಾಜಿ ಅಂತಾರಾಷ್ಟ್ರೀಯ ವೇಟ್‌ಲಿಫ್ಟರ್ ಡಾ.ಸುರೇಂದ್ರ ಪೂನಿಯಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ್ದರು. ಬಿಎಐಗೆ ಈ ವರ್ಷ ಹೊಸತಾಗಿ ಚುನಾವಣೆ ನಡೆದಿದ್ದು, ಅಖಿಲೇಶ್ ದಾಸ್ ಗುಪ್ತಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದಾಸ್ ಗುಪ್ತಾ ಎಪ್ರಿಲ್‌ನಲ್ಲಿ ನಿಧನರಾಗಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಹಿಮಂತಾ ಬಿಸ್ವಾ ಶರ್ಮ ಆಯ್ಕೆಯಾಗಿದ್ದಾರೆ.







