ಕೇರಳದಲ್ಲಿ ಐಪಿಎಲ್ ಪಂದ್ಯ ಸಾಧ್ಯತೆ

ತಿರುವನಂತಪುರ, ನ.9: ಸುಮಾರು 29 ವರ್ಷಗಳ ಬಳಿಕ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿರುವ ತಿರುವನಂತಪುರದ ನೂತನ ಗ್ರೀನ್‌ಫೀಲ್ಡ್ ಸ್ಟೇಡಿಯಂ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಪಂದ್ಯದ ಆತಿಥ್ಯವಹಿಸಿಕೊಳ್ಳಲು ಸಜ್ಜಾಗಿದೆ.
ಮಂಗಳವಾರ ಇಲ್ಲಿ ನಡೆದ ಭಾರತ-ನ್ಯೂಝಿಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ 8 ಓವರ್‌ಗೆ ಕಡಿತಗೊಂಡಿತ್ತು. ಭಾರತ 6 ರನ್‌ಗಳಿಂದ ಪಂದ್ಯ ಜಯಿಸಿ 3 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು. ಭಾರತದ 50ನೆ ಅಂತಾರಾಷ್ಟ್ರೀಯ ಸ್ಟೇಡಿಯಂ ಎನಿಸಿಕೊಂಡಿರುವ ಗ್ರೀನ್‌ಫೀಲ್ಡ್ ಸ್ಟೇಡಿಯಂನ್ನು ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದಾರೆ.
‘‘ನಾವು ಐಪಿಎಲ್ ಆಯೋಜಿಸಲು ಸಿದ್ಧರಿದ್ದೇವೆ. ಫ್ರಾಂಚೈಸಿಗಳು ಈ ಕುರಿತು ನಿರ್ಧಾರ ಕೈಗೊಳ್ಳಬೇಕಾಗಿದೆ. ಟ್ವೆಂಟಿ-20 ಪಂದ್ಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಟೇಡಿಯಂನ ಒಳಚರಂಡಿ ವ್ಯವಸ್ಥೆಯೂ ಚೆನ್ನಾಗಿದೆ. ನಾವು ಪಂದ್ಯಗಳನ್ನು ಆಯೋಜಿಸಲು ಸಮರ್ಥರಿದ್ದೇವೆ’’ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಜಯೇಶ್ ಜಾರ್ಜ್ ಹೇಳಿದ್ದಾರೆ.
ಕೇರಳದಲ್ಲಿ ಯಾವ ಫ್ರಾಂಚೈಸಿ ಐಪಿಎಲ್ ಪಂದ್ಯವನ್ನು ಆಡಬಹುದು ಎಂದು ಜಾರ್ಜ್‌ರಲ್ಲಿ ಕೇಳಿದಾಗ, ‘‘ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ವಾಪಸಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಕೇರಳದಲ್ಲಿ ಆಡಬಹುದು’’ ಎಂದರು.
ವಿರಾಟ್ ಕೊಹ್ಲಿ ಹಾಗೂ ವಿಲಿಯಮ್ಸನ್ ಸ್ಟೇಡಿಯಂನ ಒಳಚರಂಡಿ ವ್ಯವಸ್ಥೆಯ ಬಗ್ಗೆ ಶ್ಲಾಘಿಸಿದ್ದಾರೆ. ಮಳೆಯಿಂದಾಗಿ ಪಂದ್ಯ ಎರಡೂವರೆ ಗಂಟೆ ವಿಳಂಬವಾಗಿ ಆರಂಭವಾದರೂ 16 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು.







