ಅಪರಾಧದಿಂದ ದೂರ ಉಳಿಯಲು ಕಾನೂನು ಅರಿವು ಅಗತ್ಯ: ನ್ಯಾ.ಪ್ರಭಾವತಿ ಹಿರೇಮಠ್

ಚಿಕ್ಕಮಗಳೂರು, ನ.9: ಜನಾಮಾನ್ಯರು ಕಾನೂನಿನ ಬಗ್ಗೆ ಅರಿವನ್ನು ಹೊಂದಿದಾಗ ಮಾತ್ರ ತಮ್ಮ ಹಕ್ಕುಗಳನ್ನು ಸುಲಭವಾಗಿ ಪಡೆಯುವುದರ ಜೊತೆಗೆ ಅಪರಾಧಗಳಿಂದ ದೂರ ಉಳಿಯಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನ್ಯಾ.ಪ್ರಭಾವತಿ ಹಿರೇಮಠ್ ಹೇಳಿದ್ದಾರೆ.
ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ನಗರಸಭೆ, ಪಿಯು ಶಿಕ್ಷಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಇಲಾಖೆ, ಖಾಸಗಿ ಬಸ್ ಮಾಲಕರ ಸಂಘ, ಆಟೊ ಚಾಲಕರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸೇವೆಗಾಗಿ ಸಂಪರ್ಕ ಕಾನೂನು ಅರಿವು ಜಾಥಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದ ಅಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎನ್ನುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಮೂಲ ಉದ್ದೇಶ ಜನರಿಗೆ ಕಾನೂನು ಅರಿವು ನೀಡುವುದು, ರಾಜಿ ಸಂಧಾನದ ಮೂಲಕ ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದು. ಅರ್ಹ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ನೀಡುವುದಾಗಿದೆ ಎಂದರು.
ಜಾಥಾವು ನ.9ರಿಂದ 18ರವರೆಗೆ ನಡೆಯಲಿದ್ದು, ಆರ್ಥಿಕವಾಗಿ ದುರ್ಬಲತೆ ಹೊಂದಿರುವವರಿಗೆ ಉಚಿತ ಕಾನೂನು ಅರಿವು ನೆರವು ನೀಡುವ, ತಿಳುವಳಿಕೆಯನ್ನು ಬೀದಿ ನಾಟಕಗಳ ಹಾಗೂ ಕರಪತ್ರಗಳ ಮೂಲಕ ಜನತೆಗೆ ಅರಿವು ಮೂಡಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ವಾರ್ಷಿಕ ಆದಾಯ 1 ಲಕ್ಷದೊಳಗಿರುವ ಹಾಗೂ ಮಹಿಳೆಯರಿಗೆ, ಮಕ್ಕಳಿಗೆ, ಅಂಗವಿಕಲರಿಗೆ ಯಾವುದೇ ಆದಾಯ ಮಿತಿಯಿಲ್ಲದೇ ಕೆಳ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ಉಚಿತ ಕಾನೂನು ನೆರವನ್ನು ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ್ ಚೇಂಗಟಿ ಮಾತನಾಡಿ, ಸೇವೆಗಾಗಿ ಸಂಪರ್ಕ ಕಾನೂನು ಅರಿವು ಕಾರ್ಯಕ್ರಮ 10 ದಿನಗಳವರೆಗೆ ನಡೆಯಲಿದೆ ಎಂದರು.
ಹೆಚ್ಚಿನ ಪ್ರಚಾರಕ್ಕಾಗಿ ಪ್ರತಿ ಹಳ್ಳಿಗೆ ಹೋಗುವ ಬಸ್‌ಗಳಲ್ಲಿ ಉಚಿತ ಕಾನೂನು ಅರಿವು ನೆರವು ನೀಡುವ ಹಾಗೂ ಉಚಿತ ಸಹಾಯವಾಣಿ ಮಾಹಿತಿ ಒಳಗೊಂಡ ಕರಪತ್ರಗಳನ್ನು ಅಂಟಿಸಲಾಗುವುದು. ಜನರು ಉಚಿತ ಸಹಾಯವಾಣಿ ಸಂಖ್ಯೆ 1800-425-90900 ಮೂಲಕ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ದಿನದ 24 ಗಂಟೆಗಳಲ್ಲೂ ಸಲಹೆ ಪಡೆಯಬಹುದಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕ ಕೆ.ಎಚ್. ಜಗದೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ದುಶ್ಯಂತ್, ಉಪಾಧ್ಯಕ್ಷ ವೆಂಕಟೇಶ್, ಖಾಸಗಿ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಷಣ್ಮುಗಂ ಉಪಸ್ಥಿತರಿದ್ದರು.







