ದೇವೇಗೌಡರನ್ನು ಬೆದರಿಸುವ ಶಕ್ತಿ ಪ್ರಧಾನಿ ಮೋದಿಗಿಲ್ಲ: ಕುಮಾರಸ್ವಾಮಿ

ಶಿವಮೊಗ್ಗ, ನ.9: ‘ನರೇಂದ್ರ ಮೋದಿಯ ನಾಗಾಲೋಟಕ್ಕೆ ತಡೆ ಹಾಕುವ ಶಕ್ತಿಯಿರುವುದು ಎಚ್.ಡಿ.ದೇವೇಗೌಡರಿಗೆ ಮಾತ್ರವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೇರಿದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಮೋದಿ ಸರಕಾರವನ್ನು ಕಿತ್ತು ಹಾಕುವುದು ನಿಶ್ಚಿತವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿ ಗುರುವಾರ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಹೆವನ್ ಹಬೀಬ್ ಖಾನ್‌ರವರ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರನ್ನು ಎದುರು ಹಾಕಿಕೊಳ್ಳುವ ಮುಖಂಡರ ವಿರುದ್ಧ್ದ, ಹಲವು ತನಿಖಾ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸುವ ಎಚ್ಚರಿಕೆ ಕೊಡಲಾಗುತ್ತಿದೆ. ಜೈಲಿಗೆ ಕಳುಹಿಸುವ ಬೆದರಿಕೆ ಕೂಡ ಹಾಕಲಾಗುತ್ತಿದೆ. ಇದರಿಂದ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಕೆಲ ಮುಖಂಡರು ಭಯ ಪಡುವಂತಾಗಿದೆ. ಆದರೆ ಯಾವುದೇ ಕಪ್ಪುಚುಕ್ಕೆಯಿಲ್ಲದ ಎಚ್. ಡಿ.ದೇವೇಗೌಡರನ್ನು ಬೆದರಿಸುವ ಶಕ್ತಿ ನರೇಂದ್ರ ಮೋದಿಯವರಿಗಿಲ್ಲವಾಗಿದೆ. ಮೋದಿಯನ್ನು ಎದುರು ಹಾಕಿಕೊಳ್ಳುವ, ಸೆಡ್ಡು ಹೊಡೆಯುವ ತಾಕತ್ತಿರುವುದು ದೇವೇಗೌಡರಿಗೆ ಮಾತ್ರವಾಗಿದೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ಮೋದಿ ವಿರೋಧಿಗಳನ್ನು ಒಂದುಗೂಡಿಸಿ ಕೊಂಡೊಯ್ಯುವ ಸಾಮರ್ಥ್ಯ ಕೂಡ ದೇವೇಗೌಡರಿಗಿದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಜೆಡಿಎಸ್ ಗೆಲ್ಲಿಸುವ ವಾಗ್ದಾನ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವುದಾಗಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮುಖಂಡರು ವಾಗ್ದಾನವನ್ನು ಮಾಡಿದ್ದಾರೆ. ಅದರಂತೆ ಪಕ್ಷದ ಮುಖಂಡರು ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಸ್ಲಿಂ ಮುಖಂಡ ಹೆವನ್ ಹಬೀಬ್ ಖಾನ್ ವಹಿಸಿದ್ದರು. ಶಾಸಕರಾದ ಮಧು ಬಂಗಾರಪ್ಪ, ಶಾರದಾ ಪೂರ್ಯನಾಯ್ಕ್ಕಿ ಜಿಲ್ಲಾಧ್ಯಕ್ಷ ನಿರಂಜನ್, ಮಾಜಿ ಅಧ್ಯಕ್ಷ ಎಂ.ಶ್ರೀಕಾಂತ್, ಮುಹಮ್ಮದ್ ಯೂಸೂಫ್, ಕಲೀಂ ಪಾಷಾ ಸೇರಿದಂತೆ ಮೊದಲಾದವರಿದ್ದರು.







