ನನ್ನ ಪುತ್ರನ ವಿರುದ್ಧ ತನಿಖೆ ನಡೆಯುವುದಾದರೆ ಜಯ್ ಶಾ ವಿರುದ್ಧವೂ ತನಿಖೆಯಾಗಲಿ: ಯಶವಂತ್ ಸಿನ್ಹಾ

ಹೊಸದಿಲ್ಲಿ, ನ.10: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಸಂಸ್ಥೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ವಹಿವಾಟು ನಡೆಸಿದೆಯೆಂಬ ಆರೋಪದ ಮೇಲೆ ತನಿಖೆ ನಡೆಯುವುದೆಂದಾದರೆ ಪ್ಯಾರಡೈಸ್ ಪೇಪರ್ಸ್ ದಾಖಲೆಯಲ್ಲಿ ತಮ್ಮ ಪುತ್ರ ಹಾಗೂ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರ ಹೆಸರಿರುವ ವಿಚಾರದಲ್ಲೂ ತನಿಖೆ ನಡೆಸಬಹುದು ಎಂದು ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ತಂದೆ ಯಶವಂತ್ ಸಿನ್ಹಾ ಅವರು ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿರುವುದರ ಬಗ್ಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದ ಸಚಿವ ಜಯಂತ್ ಸಿನ್ಹಾ (54) ಅವರ ಹೆಸರು ಪ್ಯಾರಡೈಸ್ ಕಾಣಿಸಿಕೊಂಡಿರುವುದು ಭಾರೀ ಸುದ್ದಿಯಾಗಿದೆ.
‘‘ಪ್ಯಾರಡೈಸ್ ಪೇಪರ್ಸ್ ನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ರಾಜಕಾರಣಿಗಳನ್ನೂ 15 ದಿನಗಳಿಂದ ಹಿಡಿದು ಒಂದು ತಿಂಗಳೊಳಗೆ ತನಿಖೆ ನಡೆಸಬೇಕು. ಅದೇ ಸಮಯ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಕಂಪೆನಿಯ ಆದಾಯ ಬಿಜೆಪಿ ಸರಕಾರದ ಅವಧಿಯಲ್ಲಿ ಹಲವು ಪಾಲು ಹೆಚ್ಚಳಗೊಂಡಿರುವ ಬಗ್ಗೆ ಹಾಗೂ ಅವರು ತಮ್ಮ ತಂದೆ ಹೊಂದಿರುವ ಅಧಿಕಾರದಿಂದ ಲಾಭ ಪಡೆದಿದ್ದಾರೆಂಬ ಆರೋಪದ ಬಗ್ಗೆಯೂ ತನಿಖೆ ನಡೆಸಬೇಕು. ಜಯಂತ್ ಸಿನ್ಹ ಅವರ ವಿರುದ್ಧ ತನಿಖೆಯೆಂದರೆ, ಜಯ್ ಶಾ ವಿರುದ್ಧವೇಕೆ ಆಗಬಾರದು. ಶಾ ವಿಚಾರ ಬಂದಾಗ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿ ಎನ್ನುತ್ತಾರೆ. ಆದುದರಿಂದ ಎಲ್ಲರ ವಿರುದ್ಧವೂ ತನಿಖೆ ನಡೆಯಬೇಕು’’ ಎಂದು ಮಾಜಿ ವಿತ್ತ ಸಚಿವರಾಗಿರುವ ಯಶವಂತ್ ಸಿನ್ಹಾ ಹೇಳಿದ್ದಾರೆ.