ದಿವಾಕರನ್,ದಿನಕರನ್ ಬೆಂಬಲಿಗರಿಂದ ಐಟಿ ಅಧಿಕಾರಿಗಳ ವಾಹನಗಳಿಗೆ ತಡೆ

ತಿರುಚಿ,ನ.10: ತಮಿಳುನಾಡಿನ ತಿರುವರೂರು ಜಿಲ್ಲೆಯ ಮಣ್ಣಾರಗುಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಜೈಲುಪಾಲಾಗಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರ ಸೋದರ ವಿ.ದಿವಾಕರನ್ ಮತ್ತು ಉಪೇಕ್ಷಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರ ಬೆಂಬಲಿಗರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆದಾಯ ತೆರಿಗೆ ಅಧಿಕಾರಿಗಳ ವಾಹನಗಳನ್ನು ತಡೆ ಹಿಡಿದಿದ್ದರಿಂದ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿತ್ತು. ಬೆಂಬಲಿಗರನ್ನು ಬಂಧಿಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾ ಗಿದೆ.
ದಿವಾಕರನ್ ನಡೆಸುತ್ತಿರುವ ಸೆಂಗಮಲ ಥಾಯಾರ್ ಕಾಲೇಜಿನ ಪ್ರವೇಶ ದ್ವಾರದಲ್ಲಿ ಬೆಂಬಲಿಗರು ಐಟಿ ಅಧಿಕಾರಿಗಳ ವಾಹನಗಳಿಗೆ ಮುತ್ತಿಗೆ ಹಾಕಿದ್ದರು. ಈ ಪೈಕಿ 20ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿದವು.
ಐಟಿ ಅಧಿಕಾರಿಗಳು ಸುಂದರಕೊಟ್ಟೈ ಮತ್ತು ಮನ್ನಾಯಿ ನಗರದಲ್ಲಿಯ ದಿವಾಕರನ್ ಅವರ ನಿವಾಸಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಿದರು. ನೆರೆಯ ತಂಜಾವೂರಿನಲ್ಲಿ ಶಶಿಕಲಾ ಅವರ ಸಂಬಂಧಿ ಟಿ.ವಿ.ಮಹಾದೇವನ್ ಮತ್ತು ದಿವಾಕರನ್ ಅವರ ಬಂಟ ರಾಜೇಶ್ವರನ್ ನಿವಾಸಗಳಲ್ಲಿಯೂ ಐಟಿ ದಾಳಿಗಳು ನಡೆದಿವೆ.







