ನ.19 ರಂದು ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ
ಬೆಂಗಳೂರು, ನ.10: ನಿರಾತಂಕ ಸಂಸ್ಥೆಯ ವತಿಯಿಂದ ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನವನ್ನು ನ.19 ರಂದು ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಬಿ.ಕೆ.ಕೆಂಪೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಹಾಗೂ ಕಂಪೆನಿ ಮತ್ತು ಕಾರ್ಖಾನೆಗಳಲ್ಲಿ ಕನ್ನಡದ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಳಕೆಯ ಪ್ರಚಲಿತ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಚರ್ಚಿಸುವುದು, ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಹಾಗೂ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವೃತ್ತಿನಿರತರನ್ನು ಗುರುತಿಸಿ ಗೌರವಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 300 ಹಿರಿಯ ಮಾನವ ಸಂಪನ್ಮೂಲ ವೃತ್ತಿಪರರನ್ನು ಆಹ್ವಾನಿಸಲಾಗಿದೆ. ಇದೇ ವೇಳೆ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಐದು ಜನರನ್ನು ಸನ್ಮಾನಿಸಲಾಗುತ್ತದೆ. ಹಾಗೂ ಹಿರಿಯರಿಂದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯ ಬಳಕೆಯ ಪ್ರಚಲಿತ ಸಮಸ್ಯೆಗಳು ಮತ್ತು ಪರಿಹಾರಗಳು ಹಾಗೂ ಉತ್ತಮ ಕೈಗಾರಿಕಾ ಸಂಬಂಧಗಳು ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ಕನ್ನಡದ ಅವಶ್ಯಕತೆ ವಿಷಯದ ಕುರಿತು ಸಮಾಲೋಚನೆ ಚರ್ಚೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಿದ್ದು, ಆಯ್ಕೆಯಾದ ಮೂರು ಲೇಖನಗಳಿಗೆ ಬಹುಮಾನ ನೀಡಲಾಗುತ್ತದೆ. ಮೊದಲ ಬಹುಮಾನ 15 ಸಾವಿರ, ಎರಡನೆ ಬಹುಮಾನ 10 ಸಾವಿರ, ಮೂರನೆ ಬಹುಮಾನ 5 ಸಾವಿರ ರೂ.ಗಳು ನೀಡಲಾಗುತ್ತದೆ. ಉಳಿದ ಲೇಖನಗಳನ್ನು ಯುಜಿಸಿಯಿಂದ ಮಾನ್ಯತೆ ಪಡೆದ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಹಾಗೂ ಐಎಸ್‌ಬಿಎನ್ ನಂಬರ್‌ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ನ.19 ರೊಳಗೆ ಆಸಕ್ತ ಸಂಪನ್ಮೂಲ ಕ್ಷೇತ್ರದ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಈ socialworkfootprints@gmail.com ಮೇಲ್ ಲೇಖನ ಕಳುಹಿಸಬೇಕು ಎಂದು ತಿಳಿಸಿದರು.







