ವೇಣುಗೋಪಾಲ್ ಅವರನ್ನು ಎಐಸಿಸಿ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು: ಜಗದೀಶ್ ಶೆಟ್ಟರ್
ಸೋಲಾರ್ ಹಗರಣ
ಬೆಂಗಳೂರು, ನ. 10: ಸೋಲಾರ್ ಹಗರಣ ಹಾಗೂ ಮಹಿಳೆ ಮೇಲೆ ಅತ್ಯಾಚಾರದ ಆರೋಪದಲ್ಲಿ ಸಿಲುಕಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಎಐಸಿಸಿ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ವಿಧಾನಸಭೆಯಲ್ಲಿ ನ್ಯಾ.ಕೆ.ಶಿವರಂಜನ್ ಆಯೋಗದ ವರದಿ ಮಂಡಿಸಿದ್ದು, ವೇಣುಗೋಪಾಲ್ ಹೆಸರು ಉಲ್ಲೇಖಿಸಿದೆ. ಹೀಗಾಗಿ ಅವರಿಗೆ ಉಸ್ತುವಾರಿ ವಹಿಸಿಕೊಳ್ಳುವ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು.
ಬಿಜೆಪಿಯವರನ್ನು ಟೀಕಿಸುವ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಬಿಜೆಪಿ ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಶೆಟ್ಟರ್, ವೇಣುಗೋಪಾಲ್ ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಹೋರಾಟ ರೂಪಿಸಲಿದೆ ಎಂದರು.
ಜಾರ್ಜ್ ವಿರುದ್ಧ ಹೋರಾಟ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಟಿಪ್ಪು ಕುರಿತು ತಾನೂ ಯಾವುದೇ ಕೃತಿಗೂ ಮುನ್ನುಡಿ ಬರೆದಿಲ್ಲ. ಆದರೂ, ತನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಸರಕಾರ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿದ್ದರೂ ತಾನು ಟಿಪ್ಪು ಜಯಂತಿ ಬಹಿಷ್ಕರಿಸುವೆ. ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರ ವಿರುದ್ಧ ಪಕ್ಷ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.
-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ







